ರಾಜ್ಯ

ಸಾಲದ ಹಣಕ್ಕೆ ಕೋಳಿ ಅಂಗಡಿಯಲ್ಲಿ ಜೀತದಾಳಾಗಿದ್ದ ಯುವಕನ ರಕ್ಷಣೆ 

Srinivasamurthy VN

ಮಂಡ್ಯ: ಸಾಲದ ಹಣಕ್ಕಾಗಿ ಚಿಕನ್ ಮತ್ತು ಮಟನ್ ಅಂಗಡಿಯೊಂದರಲ್ಲಿ ಜೀತದಾಳಾಗಿ ದುಡಿಯುತ್ತಿದ್ದ ಯುವಕನೋರ್ವನನ್ನು ತಾಲ್ಲೂಕು ಅಧಿಕಾರಿಗಳು ರಕ್ಷಿಸಿರುವ  ಪ್ರಕರಣ ತಾಲ್ಲೂಕಿನ ಬೆಳ್ಳೂರು ಕ್ರಾಸ್‌ನಲ್ಲಿ ನಡೆದಿದೆ.

ನಾಗಮಂಗಲ ತಾಲ್ಲೂಕಿನ ಬುಡುಬುಡುಕೆ ಕಾಲೋನಿಯ ಮಂಜುನಾಥ್(23 ವರ್ಷ) ಎಂಬ ಯುವಕನನ್ನೇ ಅಧಿಕಾರಿಗಳ ದಾಳಿಯಿಂದ ಜೀತಮುಕ್ತಗೊಳಿಸಲಾಗಿದ್ದು ಬೆಳ್ಳೂರು ಕ್ರಾಸ್ ಬೆಳ್ಳೂರು ರಸ್ತೆಯ ಚಿಕನ್ ಮಟನ್ ಅಂಗಡಿಯ ಶೇಖರ್ ಎಂಬುವನೇ ಜೀತಗಾರಿಕೆ ಮಾಡಿಸಿಕೊಳ್ಳು ತ್ತಿದ್ದ ಅಂಗಡಿ ಮಾಲೀಕನಾಗಿದ್ದಾನೆ ಎಂದು ಆರೋಪಿಸಲಾಗಿದೆ.

40 ಸಾವಿರ ಸಾಲದ ಬಡ್ಡಿ ಹಣಕ್ಕೆ ಕಳೆದ ಎಂಟು ವರ್ಷದಿಂದ ಅಂಗಡಿಯಲ್ಲಿ ಯುವಕ ಮಂಜುನಾಥ್ ಜೀತದಾಳಾಗಿ ದುಡಿಯುತ್ತಿದ್ದ. ಮಾಲಿಕ ಶೇಖರ್ ಕಿರುಕುಳ ದಿಂದ ಬೇಸತ್ತು ಮಂಜುನಾಥ್ ಕೋರಿಕೆಯ ಮೇರೆಗೆ ಜೀವನಜ್ಯೋತಿ ಸಂಸ್ಥೆಯ ಸದಸ್ಯರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು.

ದೂರಿನನ್ವಯ ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾರ ಸೂಚನೆಯಂತೆ ನಾಗಮಂಗಲ ತಹಶೀಲ್ದಾರ್ ಕುಂಝಿ ಅಹಮದ್ ತಾ.ಪಂ.ಕಾರ್ಯನಿರ್ವಾಹಣಧಿಕಾರಿ ಅನಂತರಾಜು, ಕಾರ್ಮೀಕ ನಿರೀಕ್ಷಕ ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ರಾಜಶೇಖರ್, ಬೆಳ್ಳೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ನೇತೃತ್ವದ ಅಧಿಕಾರಿಗಳ ತಂಡ ಬುಧವಾರ ಸಂಜೆ ಅಂಗಡಿ ಮೇಲೆ ದಾಳಿ ಮಾಡಿ ಪರಿಶೀಲನೆ ಮಾಡಿದೆ. 

ಈ ವೇಳೆ ಪತ್ತೆಯಾದ ಯುವಕನನ್ನು ರಕ್ಷಣೆ ಮಾಡಿ ಮಾಲೀಕನ ವಿರುದ್ದ ಬೆಳ್ಳೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ದೂರಿನಂತೆ ಬೆಳ್ಳೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಮುಂದಿನ ಕ್ರಮಕೈಗೊಳ್ಳಲಾಗಿದೆ.

-ನಾಗಯ್ಯ

SCROLL FOR NEXT