ರಾಜ್ಯ

ವಸತಿ ಶಾಲೆ ಪ್ರವೇಶದಲ್ಲಿ ಶೇ.25 ರಷ್ಟು ಸೀಟು ಸ್ಥಳೀಯ ಮಕ್ಕಳಿಗೆ ಮೀಸಲು: ಡಿಸಿಎಂ ಕಾರಜೋಳ

Lingaraj Badiger

ತುಮಕೂರು: ರಾಜ್ಯದಲ್ಲಿ ಇನ್ನು ಮುಂದೆ ವಸತಿ ಶಾಲೆಗಳ ಪ್ರವೇಶಾತಿಯಲ್ಲಿ ಶೇ.25ರಷ್ಟು ಸೀಟುಗಳನ್ನು ಸ್ಥಳೀಯ ಮಕ್ಕಳಿಗೆ ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವ ಗೋವಿಂದ ಎಂ. ಕಾರಜೋಳ ತಿಳಿಸಿದ್ದಾರೆ.

ಇಂದು ಸಿರಾ ತಾಲ್ಲೂಕು ಬುಕ್ಕಾಪಟ್ಟಣ ಹೋಬಳಿ ರಂಗನಾಥಪುರದಲ್ಲಿ ಪರಿಶಿಷ್ಟ ವರ್ಗಗಳ ಇಲಾಖೆಯ ವಸತಿ ಶಾಲಾ ಸಮುಚ್ಚಯದ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು 135 ವಸತಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಈ ವಸತಿ ಶಾಲೆಗಳು ಇರುವ ಗ್ರಾಮಗಳ ಮಕ್ಕಳಿಗೆ ಇದುವರೆಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಿರಲಿಲ್ಲ. ಕೇವಲ ವಸತಿ ಶಾಲೆಯನ್ನು ಹೊರಗಿನಿಂದ ನೋಡಿ ಸಮಾಧಾನಪಡಬೇಕಾಗಿತ್ತು. ಆದರೆ ಇದುವರೆಗೂ ಇದ್ದ ಕಾನೂನನ್ನು ಬದಲಿಸಿ ಇನ್ನು ಮುಂದೆ ವಸತಿ ಶಾಲೆಗಳು ಇರುವ ತಾಲೂಕಿನ ಸ್ಥಳೀಯ ಮಕ್ಕಳಿಗೆ ಶೇ. 25 ರಷ್ಟು ಸೀಟುಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದರು.

ಬಡ ಮಕ್ಕಳು ವ್ಯಾಸಂಗ ಮಾಡಲು ಉತ್ತಮ ಮೂಲಭೂತ ಸೌಕರ್ಯ ಇರುವಂತಹ ಕಟ್ಟಡ ಇರಬೇಕು. ವಾಸಕ್ಕೆ ಉತ್ತಮ ವಾತಾವರಣ ಇರಬೇಕು ಎನ್ನುವ ಕಾರಣಕ್ಕೆ ನೂತನವಾಗಿ ವಸತಿ ಶಾಲೆಗಳ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.

SCROLL FOR NEXT