ರಾಜ್ಯ

ಇನ್ನು ಮುಂದೆ ಕೃಷಿಯೇತರರು ಕೃಷಿ ಭೂಮಿಯನ್ನು ಖರೀದಿಸಬಹುದು:ರಾಜ್ಯ ಸಚಿವ ಸಂಪುಟ ಒಪ್ಪಿಗೆ

Sumana Upadhyaya

ಬೆಂಗಳೂರು:ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಇದೀಗ ರಾಜ್ಯ ಸರ್ಕಾರ ತಿದ್ದುಪಡಿಗೆ ಮತ್ತಷ್ಟು ತಾತ್ವಿಕ ಒಪ್ಪಿಗೆ ನೀಡಲು ನಿರ್ಧರಿಸಿದೆ.

ಕೈಗಾರಿಕಾ ಕ್ಷೇತ್ರಗಳಲ್ಲಿ ತೊಡಗಿರುವವರು, ಕೃಷಿಯೇತರರು ಇನ್ನು ಮುಂದೆ ಕೃಷಿ ಭೂಮಿ ಖರೀದಿಸಬಹುದು ಎಂಬ ತಿದ್ದುಪಡಿ ಮಾಡಲು ರಾಜ್ಯ ಸಚಿವ ಸಂಪುಟ ನಿನ್ನೆ ಒಪ್ಪಿಗೆ ನೀಡಿದೆ.ಸಚಿವ ಸಂಪುಟ ಒಪ್ಪಿಗೆ ನೀಡಿದ ನಂತರ ಮಸೂದೆಯನ್ನು ವಿಧಾನಸಭೆಯಲ್ಲಿ ಚರ್ಚೆಗೆ ಮಂಡಿಸಲಾಗುವುದು.

ಈ ಬಗ್ಗೆ ಸಂಸದೀಯ ವ್ಯವಹಾರಗಳ ಸಟಿವ ಜೆ ಸಿ ಮಾಧುಸ್ವಾಮಿ ಮತ್ತು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 79-ಎ, 79-ಬಿ, 79-ಸಿ ಮತ್ತು ಸೆಕ್ಷನ್ 80ನ್ನು ರದ್ದುಗೊಳಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಇನ್ನು ಕಾಯ್ದೆಯ ಸೆಕ್ಷನ್ 63ರಡಿ ಭೂಮಿ ಹೊಂದಿರುವುದನ್ನು ಪ್ರತಿ ಕುಟುಂಬಕ್ಕೆ 10 ಘಟಕಗಳಿಂದ 20 ಘಟಕಗಳಿಗೆ ದ್ವಿಗುಣಗೊಳಿಸಲು ಸಹ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು. ಆದರೆ ಪ್ರತಿ ಕುಟುಂಬ ಗರಿಷ್ಠ 108 ಎಕರೆ ಜಮೀನನ್ನು ಹೊಂದಿರಬಹುದು ಎಂಬ ನಿರ್ಬಂಧವನ್ನು ಬದಲಾಯಿಸದಿರಲು ತೀರ್ಮಾನಿಸಲಾಗಿದೆ.

ಕಳೆದ 45 ವರ್ಷಗಳಲ್ಲಿ ಭೂ ಸುಧಾರಣಾ ಕಾಯ್ದೆ ಬಂದ ನಂತರ ಸೆಕ್ಷನ್ 79ಎ, ಬಿ, ಸಿ ಮತ್ತು ಸೆಕ್ಷನ್ 80ರಡಿಯಲ್ಲಿ 83,171 ಕೇಸುಗಳು ಸಲ್ಲಿಕೆಯಾಗಿದ್ದರೂ ಸರ್ಕಾರ ಶೇಕಡಾ 1ರಷ್ಟು ಭೂಮಿಯನ್ನು ಸಹ ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈ ನಿರ್ಬಂಧ ಮೂಲಕ ರೈತರು, ಭೂಮಾಲೀಕರ ವಿರುದ್ಧ ಕಿರುಕುಳಗಳು ನಡೆಯುತ್ತಿದ್ದವು.

ಈ ತಿದ್ದುಪಡಿಯಿಂದ ಕಿರುಕುಳ ನೀಡುವುದು ತಪ್ಪುವುದಲ್ಲದೆ ಇನ್ನು ಮುಂದೆ ಕೃಷಿಯೇತರರಿಗೆ ಭೂಮಿ ಖರೀದಿಸುವುದು ಸುಲಭವಾಗುತ್ತದೆ. ನೆರೆಯ ಆಂಧ್ರ ಪ್ರದೇಶ ಮತ್ತು ತಮಿಳು ನಾಡುಗಳಲ್ಲಿ ಸರಳ ಭೂ ಸುಧಾರಣಾ ಕಾಯ್ದೆಯಿರುವುದರಿಂದ ಹೂಡಿಕೆದಾರರನ್ನು ಹೆಚ್ಚು ಆಕರ್ಷಿಸುತ್ತಿದ್ದು, ಕರ್ನಾಟಕದಲ್ಲಿ ಉದ್ಯಮ ಕ್ಷೇತ್ರವನ್ನು ಹೆಚ್ಚು ಮಾಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಆದರೆ ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರದ ಈ ನಡೆಯನ್ನು ವಿರೋಧಿಸಿದೆ. ಭೂ ಸುಧಾರಣಾ ಕಾಯ್ದೆ ರೈತರ ಹಿತ ಕಾಪಾಡುವಂತಿರಬೇಕು. ಆದರೆ ಇದರಿಂದ ಭೂ ಮಾಫಿಯಾ ಹೆಚ್ಚಾಗುವ ಸಾಧ್ಯತೆಯಿದ್ದು ಕೃಷಿ ಭೂಮಿಗಳನ್ನು ಕೃಷಿಯೇತರ ಚಟುವಟಿಕೆಗಳಿಗೆ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇಂತಹ ತೀರ್ಮಾನ ಭೂ ಸುಧಾರಣೆಯ ಉದ್ದೇಶವನ್ನು ತಳ್ಳಿಹಾಕುತ್ತದೆ ಎಂದು ಕಾಂಗ್ರೆಸ್ ಆಪಾದಿಸಿದೆ.

SCROLL FOR NEXT