ರಾಜ್ಯ

ಬಾಗಲಕೋಟೆ ಡಿಸಿಸಿ ಬ್ಯಾಂಕ್ ಚುನಾವಣೆಗೆ ಆಗಸ್ಟ್ 29 ರಂದು ಮುಹೂರ್ತ ಫಿಕ್ಸ್

Prasad SN

ಬಾಗಲಕೋಟೆ: ಬಹುನಿರೀಕ್ಷಿತ ಬಾಗಲಕೋಟೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿ ಚುನಾವಣೆಗೆ ಮುಹೂರ್ತ ಫೀಕ್ಸ್ ಆಗಿದ್ದು, ಆಗಸ್ಟ್ 29 ರಂದು ಚುನಾವಣೆ ನಡೆಯಲಿದೆ.

ಇದುವರೆಗೆ ರಾಜ್ಯಸಭೆ ಚುನಾವಣೆ, ಮೇಲ್ಮನೆ ಚುನಾವಣೆ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಬೀಡು ಬಿಟ್ಟಿದ್ದ ಜಿಲ್ಲೆಯ ಪ್ರಮುಖ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಹಾಗೂ ಮುಖಂಡರು ಜಿಲ್ಲೆಯಲ್ಲೇ ಠಿಕಾಣಿ ಹೂಡಲಿದ್ದಾರೆ.

ಮುಂದಿನ ಒಂದುವರೆ ತಿಂಗಳು ಜಿಲ್ಲಾ ರಾಜಕಾರಣ ಡಿಸಿಸಿ ಬ್ಯಾಂಕ್ ಚುನಾವಣೆ ಸುತ್ತಲೇ ಗಿರಕಿ ಹೊಡೆಯಲಿದೆ. ಈಗಾಗಲೇ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿಗೆ ಸ್ಪರ್ಧಿಸಬೇಕು ಎನ್ನುತ್ತಿರುವ ಆಕಾಂಕ್ಷಿಗಳು ಸಾಕಷ್ಟು ಸಿದ್ದತೆಯಲ್ಲಿ ತೊಡಗಿದ್ದಾರೆ. ಇನ್ನೂ ಇದರ ವೇಗ ಹೆಚ್ಚಾಗಲಿದೆ.

ಮೇಲ್ಮನೆ ಸದಸ್ಯರಾಗಿ, ಸತತ ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆ ಆಗಿರುವ ಪಿ.ಸಿ.ಗದ್ದಿಗೌಡರ ಕೂಡ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗುವ ಉದ್ದೇಶದಿಂದಲೇ ಪಿಕೆಪಿಎಸ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಇದನ್ನು ಗಮನಿಸಿದರೆ ಈ ಬಾರಿಯ ಸ್ಪರ್ಧೆ ಯಾವ ಹಂತ ತಲುಪಲಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಸಂಸದ ಗದ್ದಿಗೌಡರಂತೆ ಜಿಲ್ಲೆಯ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಸಹಕಾರಿ ಕ್ಷೇತ್ರದಲ್ಲಿನ ಮುಂಚೂಣಿ ಮುಖಂಡರೆಲ್ಲ ಡಿಸಿಸಿ ನಿರ್ದೇಶಕ ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದಾರೆ. ಜತೆಗೆ ಹಾಲಿ ನಿರ್ದೇಶಕ ಮಂಡಳಿಯ ಬಹುತೇಕರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಾಗಿ ತಯಾರಿ ನಡೆಸಿದ್ದಾರೆ.

ಶತಾಯ –ಗತಾಯ ಈ ಬಾರಿ ಡಿಸಿಸಿ ಬ್ಯಾಂಕ್ ಆಡಳಿತವನ್ನು ತನ್ನ ಸುಪರ್ದಿಗೆ ಪಡೆದುಕೊಳ್ಳಲೇ ಬೇಕು ಎಂದು ಕೇಸರಿ ಪಡೆ ನಿಶ್ಚಯಿಸಿದಂತೆ ಆ ಹಿನ್ನೆಲೆಯಲ್ಲಿ ತನ್ನದೇ ಬೆಂಬಲಿಗರ ಪೆನಲ್ ಮಾಡಿ ಅಭ್ಯರ್ಥಿಗಳನ್ನು ಕಣಕ್ಕೆ ಹಾಕುವ ಎಲ್ಲ ಪ್ರಯತ್ನಗಳು ಕಮಲ ಪಾಳೆಯದಲ್ಲಿ ಜೋರಾಗಿದೆ. ಅಭ್ಯರ್ಥಿಗಳ ಆಯ್ಕೆಗಾಗಿ ಕೋರ ಕಮೀಟಿ ಸಭೆ ದಿನಾಂಕ ಕೂಡ ನಿಗದಿ ಆಗಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಎರಡು ಪೆನಲ್‌ಗಳ ಜತೆಗೆ ಕೆಲವರು ಪಕ್ಷೇತರರಾಗಿ ಅಖಾಡಕ್ಕೆ ಇಳಿಯ ಸಜ್ಜಾಗುತ್ತಿದ್ದಾರೆ. ವೈಯಕ್ತಿಕ ವರ್ಚಸ್ಸು ಮತ್ತು ಜಾತಿ ರಾಜಕಾರಣದ ಜತೆಗೆ ಪಕ್ಷ ರಾಜಕಾರಣ ಕೂಡ ಜೋರಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಬ್ಯಾಂಕ್ ನಿರ್ದೇಶಕ ಮಂಡಳಿಗೆ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ. ಮೂಲಗಳ ಪ್ರಕಾರ ಸಂಸದ ಪಿ.ಸಿ.ಗದ್ದಿಗೌಡರ, ಮೇಲ್ಮನೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ, ಮಾಜಿ ಸಚಿವ ಹಾಗೂ ಶಾಸಕ ಮುರುಗೇಶ ನಿರಾಣಿ, ಡಿಸಿಸಿ ಬ್ಯಾಂಕ್ ಹಾಲಿ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಅಜಯಕುಮಾರ ಸರನಾಯಕ, ಮಾಜಿ ಸಚಿವರಾದ ಎಚ್.ವೈ. ಮೇಟಿ, ಬಿ.ಬಿ. ಚಿಮ್ಮನಕಟ್ಟಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಎಂ.ಕೆ. ಪಟ್ಟಣಶೆಟ್ಟಿ, ಬ್ಯಾಂಕ್‌ನ ಹಾಲಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ನಿರ್ದೇಶಕರಾಗಿರುವ ಡಾ ಎಂ. ಎಸ್. ದಡ್ಡೇನವರ ಮತ್ತು ಬಸವೇಶ್ವರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಚುನಾವಣೆ ಅಖಾಡಕ್ಕೆ ಇಳಿಯವುದು ಬಹುತೇಕ ಖಚಿತವಾಗಿದೆ.

ನಿರ್ದೇಶಕ ಮಂಡಳಿಯ ಕೆಲ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ಪ್ರಮುಖರ ನಡುವೆ ಒಳ ಒಪ್ಪಂದ ನಡೆದಲ್ಲಿ ಮಾತ್ರ ಇದು ಸಾಧ್ಯವಿದೆ. ಇಲ್ಲದೆ ಹೋದಲ್ಲಿ ಚುನಾವಣೆ ಅನಿವಾರ್ಯ ಎನ್ನುವ ಸ್ಥಿತಿ ಇದೆ. ಹಿಂದಿನಿಂದಲೂ ಅಜಯಕುಮಾರ ಸರನಾಯಕ, ಎಸ್.ಆರ್. ಪಾಟೀಲ ಅವಿರೋಧವಾಗಿ ಆಯ್ಕೆಗೊಂಡ ಇತಿಹಾಸವಿದೆ. ಈ ಬಾರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಎಲ್ಲ ಕ್ಷೇತ್ರಗಳಿಗೂ ಸ್ಪರ್ಧಿಸಲು ಮುಂದಾದಲ್ಲಿ ಅವರೂ ಕೂಡ ಚುನಾವಣೆ ಎದುರಿಸಬೇಕಾದ ಸ್ಥಿತಿ ನಿರ್ಮಾಣಗೊಳ್ಳಲಿದೆ.

ವರದಿ: ವಿಠ್ಠಲ ಆರ್. ಬಲಕುಂದಿ

SCROLL FOR NEXT