ರಾಜ್ಯ

ಚಾಮರಾಜನಗರ: ಮುಜರಾಯಿ ದೇವಸ್ಥಾನಗಳಲ್ಲಿ ಸಂಸ್ಕೃತ ಬದಲು ಕನ್ನಡದಲ್ಲಿ ಮಂತ್ರಘೋಷ

Shilpa D

ಚಾಮರಾಜನಗರ:  ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಮುಜರಾಯಿ ದೇವಸ್ಥಾನಗಳಲ್ಲಿ ಸಂಸ್ಕೃತದಲ್ಲಿ ಮಂತ್ರ ಹೇಳುವುದು ಇನ್ಮುಂದೆ ಬಂದ್ ಆಗಿ ಕನ್ನಡದಲ್ಲೇ ಮೊಳಗಲಿದೆ. 

ಚಾಮರಾಜನಗರ ಜಿಲ್ಲಾಡಳಿತದಿಂದ ಹೀಗೊಂದು ಆದೇಶ ಹೊರ ಬಿದ್ದಿದೆ. ಇನ್ನು ಮುಂದೆ ಕನ್ನಡದಲ್ಲಿಯೇ ಮಂತ್ರೋಚ್ಛಾರಣೆ, ಅರ್ಚನೆ, ಸಂಕಲ್ಪ, ಪೂಜಾ ವಿಧಿವಿಧಾನಗಳು ನಡೆಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಸಂಸ್ಕೃತದಲ್ಲೇ ಮಂತ್ರ ಪಠಣ, ಅರ್ಚನೆ, ಸಂಕಲ್ಪ, ವಿವಿಧ ಪೂಜಾ ಕೈಂಕರ್ಯಗಳನ್ನು ನಡೆಯುವುದನ್ನು ನೋಡಿದ್ದೇವೆ. ಆದರೆ ದೇವಸ್ಥಾನಕ್ಕೆ ಹೋಗುವ ಶೇ.99 ರಷ್ಟು ಮಂಂದಿಗೆ ಸಂಸ್ಕೃತ ಬರುವುದಿಲ್ಲ. 

ಹಾಗಾಗಿ ಅರ್ಚಕರು ಹೇಳುವ ಮಂತ್ರವಾಗಲಿ, ಭಕ್ತರ ಪರವಾಗಿ ಮಾಡುವ ಸಂಕಲ್ಪವಾಗಲಿ, ಅರ್ಚನೆಯಾಗಲಿ, ಶ್ಲೋಕಗಳ ಅರ್ಥವಾಗಲಿ ತಿಳಿಯುವುದಿಲ್ಲ. ಅವರು ಯಾವ ರೀತಿ ತಮ್ಮ ಪರ ದೇವರಿಗೆ ಸಂಕಲ್ಪ ಅರ್ಚನೆ ಪ್ರಾರ್ಥನೆ ಮಾಡುತ್ತಿದ್ದಾರೆ ಎಂಬುದು ಭಕ್ತರಿಗೂ ತಿಳಿಯುವಂತಾಗಬೇಕು ಎಂಬ ಉದ್ದೇಶದಿಂದ ಚಾಮರಾಜನಗರ ಜಿಲ್ಲಾಡಳಿತ ಹೊಸ ಆದೇಶವೊಂದನ್ನು ಹೊರಡಿಸಿದೆ.

ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೊಳಪಡುವ ಚಾಮರಾಜನಗರ ಜಿಲ್ಲೆಯ ಎಲ್ಲಾ ದೇವಾಲಯಗಳಲ್ಲಿ ಇನ್ನು ಮುಂದೆ ಕನ್ನಡ ಭಾಷೆಯಲ್ಲಿಯೇ ಮಂತ್ರೊಚ್ಛಾರಣೆ, ಪೂಜಾ ವಿಧಿ ವಿಧಾನ ಗಳನ್ನು ನಡೆಸುವಂತೆ ಜಿಲಾಧಿಕಾರಿ ಡಾ. ಎಂ.ಆರ್. ರವಿ ಸೂಚಿಸಿದ್ದಾರೆ. 

ಮಂತ್ರೋಚ್ಚಾರಣೆ ಅರ್ಚನೆ, ಸಂಕಲ್ಪ ಇತ್ಯಾದಿ ಪೂಜಾ ಕೈಂಕರ್ಯಗಳನ್ನು ಚಾಲ್ತಿಯಲ್ಲಿರುವ ಸಂಪ್ರದಾಯ ಹಾಗೂ ಧಾರ್ಮಿಕ ಪದ್ಧತಿಗಳಿಗೆ ಧಕ್ಕೆ ಬಾರದಂತೆ ಕನ್ನಡದಲ್ಲಿಯೇ ನೆರವೇರಿಸಬೇಕು ಎಂದು ಅವರು ಸೂಚಿಸಿದ್ದಾರೆ. 

ಇದಕ್ಕಾಗಿ ಕನ್ನಡ ಪಂಡಿತರಿಂದ ಅರ್ಚಕರಿಗೆ ವಿಶೇಷ ಕಾರ್ಯಾಗಾರವೊಂದನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.ಕನ್ನಡದಲ್ಲೇ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಬೇಕೆಂಬ ಜಿಲ್ಲಾಧಿಕಾರಿಗಳ ಆದೇಶ ಭಕ್ತರ ಪ್ರಶಂಸೆಗೆ  ಪಾತ್ರವಾಗಿದೆ.

SCROLL FOR NEXT