ರಾಜ್ಯ

ಭಾರತದ ವರ್ಚಸ್ಸು ಹಾಳು ಮಾಡಲು ಟ್ರಂಪ್ ಭೇಟಿ ವೇಳೆ ದೆಹಲಿ ಹಿಂಸಾಚಾರ ನಡೆಸಲಾಗಿದೆ: ಜೆಪಿ ನಡ್ಡಾ

Manjula VN

ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಭೇಟಿ ವೇಳೆ ದೆಹಲಿಯಲ್ಲಿ ಹಿಂಸಾಚಾರ ಸೃಷ್ಟಿಸುವ ಮೂಲಕ ಭಾರತದ ವರ್ಚಸ್ಸು ಹಾಳು ಮಾಡಲು ಯತ್ನ ನಡೆಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಹೇಳಿದ್ದಾರೆ. 

ನಗರದ ಹೆಚ್ಎಸ್ಆರ್ ಲೇ ಔಟ್'ನ ಆಕ್ಸ್ ಫರ್ಡ್ ಕಾಲೇಜಿನಲ್ಲಿ ಶುಕ್ರವಾರ ರಾಜ್ಯ ಬಿಜೆಪಿ ಘಟಕ ಆಯೋಜಿಸಿದ್ದ ಪ್ರಬುದ್ಧರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತ ವಿಭಿನ್ನ ವೇದಿಕೆಗಳಲ್ಲಿ ನಿಂತಿದೆ. ಟ್ರಂಪ್ ಭಾಷಣದಲ್ಲಿ ಇದನ್ನು ಪುನರುಚ್ಛರಿಸಲಾಗಿದೆ. ದೆಹಲಿ ಹಿಂಸಾಚಾರದ ಮೂಲಕ ಭಾರತದ ವರ್ಚಸ್ಸು ಹಾಳು ಮಾಡಲು ಪಿತೂರಿ ನಡೆಸಲಾಗಿದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ ಅವರು, 20 ವರ್ಷ ಆಡಳಿದ ನಡೆಸಿದ ಕಾಂಗ್ರೆಸ್ ಒಂದೇ ಒಂದು ಬುಲೆಟ್ ಕೂಡ ಖರೀದಿ ಮಾಡಿರಲಿಲ್ಲ. ಆದರೆ, ನಾವು ಆತ್ಯಾಧುನಿಕವಾದ 5 ಲಕ್ಷ ರೈಫಲ್ಸ್ ಗಳನ್ನು ಖರೀದಿ ಮಾಡಿದ್ದೇವೆ. ದೇಶ ಕಾಯುವ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್ ನೀಡಿರಲಿಲ್ಲ. ಆದರೆ, ಬಿಜೆಪಿ ಸರ್ಕಾರ 1.86 ಲಕ್ಷ ಜಾಕೆಟ್ ಗಳನ್ನು ನೀಡಿದೆ ಎಂದು ತಿಳಿಸಿದ್ದಾರೆ. 

ಬಳಿಕ 370 ವಿಧಿ ರದ್ಧತಿ ಕುರಿತು ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿರುವ ಕೆಲ ಕುಟುಂಬಗಳು 370 ವಿಧಿಯಿಂದಾಗಿ ಲಾಭ ಪಡೆಯುತ್ತಿದ್ದವು. ಪಾಕಿಸ್ತಾನದ ವಿರುದ್ಧ ಹೋರಾಟ ಮಾಡಿದ ಬುಡಕಟ್ಟು ಜನಾಂಗದವರಿಗೆ ರಾಜಕೀಯ ಪ್ರಾತಿನಿಧ್ಯ ಇರಲಿಲ್ಲ. ಇದೀಗ ಪ್ರತೀಯೊಬ್ಬರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ರಾಜಕೀಯ ವ್ಯಕ್ತಿಗಳ ಭ್ರಷ್ಟಾಚಾರದ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಇದೀಗ ಅವರಲ್ಲಿ ಯಾವುದೇ ಆಯ್ಕೆಗಳಿಲ್ಲ, ಜೈಲು ಅಥವಾ ಬೇಲ್ (ಜಾಮೀನು)ಗಳ ಆಯ್ಕೆಯಷ್ಟೇ ಅವರ ಮುಂದಿದೆ ಎಂದಿದ್ದಾರೆ. 

SCROLL FOR NEXT