ರಾಜ್ಯ

ಉಪನ್ಯಾಸಕರಿಂದ ದ್ವಿತೀಯ ಪಿ.ಯು ಮೌಲ್ಯಮಾಪನ ಬಹಿಷ್ಕಾರದ ಎಚ್ಚರಿಕೆ: ಬೇಡಿಕೆ ಈಡೇರಿಕೆ ಬಗ್ಗೆ  ಸುರೇಶ್ ಕುಮಾರ್ ಭರವಸೆ

Srinivas Rao BV

ಬೆಂಗಳೂರು: ಪದವಿಪೂರ್ವ ಕಾಲೇಜು ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ದ್ವಿತೀಯ ಪಿಯು ಪರೀಕ್ಷೆ ಮೌಲ್ಯಮಾಪನ ಬಹಿಷ್ಕರಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. 

ದೀರ್ಘಕಾಲದಿಂದ ಬೇಡಿಕೆಗಳು ಈಡೇರದೇ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧದ ಪ್ರತಿಭಟನೆಯ ಭಾಗವಾಗಿ ಮೌಲ್ಯಮಾಪನ ಬಹಿಷ್ಕರಿಸಿ, ಮಾ.28 ರಿಂದ ಅನಿರ್ದಿಷ್ಟಾವಧಿ ಉಪವಾಸ ಮಾಡುವುದಾಗಿ ಕರ್ನಾಟಕ ಪದವಿಪೂರ್ವ ಉಪನ್ಯಾಸಕರ ಸಂಘ (ಕೆಪಿಯುಎಲ್ಎ) ಹೇಳಿದೆ. 

ಈ ನಡುವೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು,  ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಬೇಡಿಕೆಗಳ ಕುರಿತು ಇಂದು ಸಭೆ ಕರೆದಿದ್ದು, ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವೆ. ದಯಮಾಡಿ ವಿದ್ಯಾರ್ಥಿಗಳ ಕನಸನ್ನು ಭಗ್ನಗೊಳಿಸುವ ಕೆಲಸ ಮಾಡಬೇಡಿ ಎಂದು ಮೌಲ್ಯಮಾಪನ ಉಪನ್ಯಾಸಕರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ ಕುಮಾರ್ ಮನವಿ ಮಾಡಿದ್ದಾರೆ.

ಮೌಲ್ಯಮಾಪನ ಬಹಿಷ್ಕರಿಸುವುದಾಗಿ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘಟನೆ ಹೇಳಿರುವುದು ಆತಂಕದೊಂದಿಗೆ ಬೇಸರ ತಂದಿದೆ. ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇ‌ನೆ‌ ಎಂದು ಭರವಸೆ ನೀಡಿದ್ದಾರೆ. ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಕೋರಿರುವ ಅವರು, ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಿಮ್ಮ ವಿಶ್ವಾಸಕ್ಕೆ‌ ಧಕ್ಕೆ ಬರದ ರೀತಿಯಲ್ಲಿ ನಿರ್ವಹಿಸಿದೆ.

ನಿಮಗೆ ಪಾಠ ಮಾಡಿದ ಉಪನ್ಯಾಸಕರೇ ನಿಮ್ಮ ಮೌಲ್ಯಮಾಪಕರಾದ ಕಾರಣ ಅವರು ನಿಮ್ಮ ಹಿತ ಕಾಯದೇ ಇರರು, ಅವರ ಹಿತವನ್ನು ಕಾಪಾಡುವ ಜವಾಬ್ದಾರಿ ನನ್ನದು. ನೀವು ಆತ್ಮ ವಿಶ್ವಾಸದಿಂದ ಪರೀಕ್ಷೆ‌ ಎದುರಿಸಿ ಎಂದು ಕಿವಿಮಾತು ಹೇಳಿದ್ದಾರೆ.ಪದವಿ ಪೂರ್ವ ಪರೀಕ್ಷೆ ಇನ್ನು ಕೇವಲ ಏಳು ದಿನ ಬಾಕಿ ಉಳಿದಿದೆ. 

ಇದುವರೆಗೆ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದಿದ್ದು, ಉಳಿದ ಪರೀಕ್ಷೆಗಳನ್ನೂ ಆತಂಕಕ್ಕೆ ಒಳಗಾಗದೆ ಪರೀಕ್ಷೆ ಬರೆಯಿರಿ ಎಂದು ಸುರೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಭರವಸೆಯ ಮಾತುಗಳನ್ನಾಡಿದ್ದಾರೆ.

SCROLL FOR NEXT