ರಾಜ್ಯ

ನ್ಯಾಶನಲ್ ಕಾಲೇಜು ಗ್ರೌಂಡ್ ಗೆ ಕೆ ಆರ್ ಮಾರುಕಟ್ಟೆ ಶಿಫ್ಟ್, ಮುಗಿಬಿದ್ದ ಜನ:ಕೊರೋನಾ ತಡೆ ಹೇಗೆ ಜನರ ಪ್ರಶ್ನೆ?

Sumana Upadhyaya

ಬೆಂಗಳೂರು: ಸಂಪೂರ್ಣ ಲಾಕ್ ಡೌನ್ ನಿಂದಾಗಿ ಜನರ ಅಗತ್ಯದ ವಸ್ತುಗಳಲ್ಲಿ ಕೊರತೆ ಉಂಟಾಗಿದ್ದು ತರಕಾರಿ ಮತ್ತು ದಿನಸಿ ಪೂರೈಕೆಯಲ್ಲಿಯೂ ವ್ಯತ್ಯಯವಾಗುತ್ತಿದೆ.

ಕೊರೋನಾ ಸೋಂಕು ಹಬ್ಬುವ ಭೀತಿಯಿಂದ ನಗರದ ಬಹುದೊಡ್ಡ ಕೆ ಆರ್ ಮಾರುಕಟ್ಟೆಯನ್ನು ಬಸವನಗುಡಿಯ ನ್ಯಾಷನಲ್ ಮೈದಾನದಲ್ಲಿ ತೆರೆಯಲು ಆರಂಭಿಸಿ ಇಂದು ಶನಿವಾರ ಅದರಂತೆ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಮಾರುಕಟ್ಟೆ ನಡೆಯಿತು. ಆದರೆ ಇಲ್ಲಿ ಸೋಂಕನಿಂದ ಜಾಗ್ರತೆಯಿರಲು ಪಾಲಿಸಬೇಕಾದ ನಿಯಮಗಳನ್ನು ಗಾಳಿಗೆ ತೂರಿ ಎಲ್ಲರೂ ವರ್ತಿಸಿದ್ದು ಕಂಡುಬಂತು.

ಇನ್ನು ಮಾರುಕಟ್ಟೆಯಲ್ಲಿ ಕೆಲವು ವಸ್ತುಗಳ ಪೂರೈಕೆಯಲ್ಲಿಯೂ ವ್ಯತ್ಯಯ ಕಂಡುಬಂತು. ಕೋವಿಡ್-19 ನ್ನು ಪರಿಣಾಮಕಾರಿಯಾಗಿ ಎದುರಿಸಲು ನ್ಯಾಶನಲ್ ಕಾಲೇಜು ಮೈದಾನಕ್ಕೆ ತರಕಾರಿ, ಹೂವು, ಹಣ್ಣು ಮಾರುಕಟ್ಟೆಯನ್ನು ವಿಸ್ತರಿಸಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರೂ ಕೂಡ ಇದು ಪರಿಣಾಮಕಾರಿಯಾಗಿದೆ ಎಂದು ಅನಿಸುತ್ತಿಲ್ಲ.

ಷರತ್ತು ಮೇಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಸ್ವಚ್ಛತೆ ಬಗ್ಗೆ ನಿಗಾವಹಿಸಬೇಕು ಎಂಬ ವಿಷಯಗಳ ಮೇಲೆ ಮಾರುಕಟ್ಟೆಯನ್ನು ತೆರೆಯಲಾಗಿದೆ. ನಿನ್ನೆ ಇಲ್ಲಿಗೆ ತೇಜಸ್ವಿ ಸೂರ್ಯ ಮತ್ತು ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಪೊಲೀಸ್ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಇಂದು ಬೆಳಗ್ಗೆ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ 5 ಗಂಟೆಯಿಂದ 10 ಗಂಟೆಯವರೆಗೆ ತರಕಾರಿ ಮಾರುಕಟ್ಟೆ ಮುಕ್ತವಾಗಿತ್ತು, ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು.

ಸಂಸದ ತೇಜಸ್ವಿ ಸೂರ್ಯ ಪೊಲೀಸರ ನೆರವಿನೊಂದಿಗೆ ಬೆಂಗಳೂರು ದಕ್ಷಿಣ ಕೊರೋನಾ ವೈರಸ್ ಕಾರ್ಯಪಡೆಯನ್ನು ರಚಿಸಿದ್ದಾರೆ. ಅಲ್ಲಿ ಜನರಿಗೆ ದಿನಸಿ, ಹಾಲು, ವೈದ್ಯಕೀಯ ವಸ್ತುಗಳು, ಆಹಾರ, ಹಿರಿಯ ನಾಗರಿಕರಿಗೆ ಮತ್ತು ಬಡವರಿಗೆ ಸಹಾಯ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ 994649964ಕ್ಕೆ ಕರೆಮಾಡಿ.

ಬಿಬಿಎಂಪಿ ಏನು ಹೇಳುತ್ತದೆ:ಬೆಂಗಳೂರಿನಲ್ಲಿ ಯಶವಂತಪುರ ಮತ್ತು ಕಲಾಸಿಪಾಳ್ಯ ಹೋಲ್ ಸೇಲ್ ಮಾರುಕಟ್ಟೆ ಮಾತ್ರ ಷರತ್ತುಬದ್ಧ ತೆರೆಯಲಾಗುತ್ತದೆ. ಚಿಲ್ಲರೆ ಮಾರಾಟಗಾರರು ವಸ್ತುಗಳನ್ನು ಹೋಗಿ ತಂದು ತಮ್ಮ ಅಂಗಡಿಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಲು ಹೋಲ್ ಸೇಲ್ ಮಾರುಕಟ್ಟೆಗಳನ್ನು ತೆರೆದಿಡಲಾಗುತ್ತದೆ. ಮಾರುಕಟ್ಟೆಯನ್ನು ದಿನಪೂರ್ತಿ ತೆರೆದಿಡಲು ಸಾಧ್ಯವಿಲ್ಲ. ಜನದಟ್ಟಣೆಯಾಗಿ ಕೊರೋನಾ ಸೋಂಕು ತಡೆಗಟ್ಟುವ ಉದ್ದೇಶವೇ ಹೊರಟುಹೋಗುತ್ತದೆ ಎನ್ನುತ್ತಾರೆ ಬಿಬಿಎಂಪಿ ಆಯುಕ್ತ ಬಿಎಚ್ ಅನಿಲ್ ಕುಮಾರ್.

SCROLL FOR NEXT