ಕೊರೋನಾ ವಿರುದ್ಧ ರಾಜ್ಯ ಕ್ರಮ: ಕೇಂದ್ರದಿಂದ ಪರಿಶೀಲನೆ
ಕೊರೋನಾ ವೈರಸ್ ಮಟ್ಟಹಾಕಲು ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಪರಿಶೀಲನೆ ನಡೆಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವೈದ್ಯರ ತಂಡವೊಂದನ್ನು ರಾಜ್ಯಕ್ಕೆ ರವಾನಿಸಿದೆ.
ಬೆಂಗಳೂರು: ಕೊರೋನಾ ವೈರಸ್ ಮಟ್ಟಹಾಕಲು ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಪರಿಶೀಲನೆ ನಡೆಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವೈದ್ಯರ ತಂಡವೊಂದನ್ನು ರಾಜ್ಯಕ್ಕೆ ರವಾನಿಸಿದೆ.
ಈಗಾಗಲೇ ಈ ತಂಡ ರಾಜ್ಯಕ್ಕೆ ಆಗಮಿಸಿದ್ದು, ಬೆಂಗಳೂರು, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ.
ಕೇಂದ್ರದ ತಜ್ಞರ ವೈದ್ಯರ ತಂಡ ಈಗಾಗಲೇ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೈದ್ ಅಖ್ತರ್, ಆಯುಕ್ತ ಪಂಕಜ್ ಕುಮಾರ್ ಪಾಂಡೆ ಹಾಗೂ ಕರ್ನಾಟಕದ ರಾಷ್ಟ್ರೀಯ ಆರೋಗ್ಯ ಇಲಾಖೆ ಎಂಡಿ ರಾಮಚಂದ್ರ ರಾವ್ ಅವರೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿರುವ ಆರೋಗ್ಯ ವ್ಯವಸ್ಥೆ, ಫೀವರ್ ಕ್ಲಿನಿಕ್, ವೈದ್ಯಕೀ ಸಂಸ್ಥೆಗಳು, ಕೊರೋನಾಗಾಗಿಯೇ ನಿಯೋಜನೆಗೊಂಡಿರುವ ಆಸ್ಪತ್ರೆಗಳಾದ ವಿಕ್ಟೋರಿಯಾ ಆಸ್ಪತ್ರೆ, ನಿಮ್ಹಾನ್ಸ್, ರಾಜೀವ್ ಗಾಂಧಿ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ. ಅಲ್ಲದೆ, ಆಸ್ಪತ್ರೆಗಳಿದ್ದ ಹೆಲ್ತ್ ಸಿಸ್ಟಮ್ ಗಳನ್ನು ಅಧಿಕಾರಿಗಳು ಅಪ್ಡೇಟ್ ಮಾಡಿದ್ದು, ಕೊರೋನಾ ವಿರುದ್ಧ ತೆಗೆದುಕೊಳ್ಳಬೇಕಾಗ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆಂದು ತಿಳಿದುಬಂದಿದೆ.
ಇದಲ್ಲದೆ ಇತರೆ ಜಿಲ್ಲೆಗಳಿಗೂ ಭೇಟಿ ನೀಡಿದ ತಂಡ ಅಲ್ಲಿನ ಫೀವರ್ ಕ್ಲಿನಿಕ್ ಗಳು, ಕ್ವಾರಂಟೈನ್, ಐಸೋಲೇಷನ್ ವಾರ್ಡ್'ಗಳು, ತಾಲೂಕಿನಲ್ಲಿರುವ ಆಸ್ಪತ್ರೆಗಳು, ಮೈಕ್ರೋಬಯೋಲಾಜಿ ಪ್ರಯೋಗಾಲಯಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಸೂರತ್ಕಲ್ ನಲ್ಲಿರುವ ಕ್ವಾರಂಟೈನ್ ವ್ಯವಸ್ಥೆಗಳಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆಂದು ಹೇಳಲಾಗುತ್ತಿದೆ.