ಕೊರೋನಾ ವೈರಸ್: ರಾಜಧಾನಿ ಬೆಂಗಳೂರು ಸೇರಿದಂತೆ ಮೂರು ಜಿಲ್ಲೆಗಳು ರೆಡ್ ಝೋನ್ ನಲ್ಲಿ, 14 ಜಿಲ್ಲೆಗಳು ಗ್ರೀನ್ ಝೋನ್ ನಲ್ಲಿ!
ಮಾರಕ ಕೊರೋನಾ ವೈರಸ್ ಗೆ ತತ್ತರಿಸಿ ಹೋಗಿರುವ ಕರ್ನಾಟಕದಲ್ಲಿನ ಜಿಲ್ಲೆಗಳನ್ನು ಕೇಂದ್ರ ಸರ್ಕಾರ ಮೂರು ಝೋನ್ ಗಳಾಗಿ ವಿಂಗಡಣೆ ಮಾಡಿದ್ದು ಈ ಪೈಕಿ ರಾಜಧಾನಿ ಬೆಂಗಳೂರು ಸೇರಿದಂತೆ ಮೂರು ಜಿಲ್ಲೆಗಳು ರೆಡ್ ಝೋನ್ ನಲ್ಲಿವೆ ಎಂದು ತಿಳಿದುಬಂದಿದೆ.
ಬೆಂಗಳೂರು: ಮಾರಕ ಕೊರೋನಾ ವೈರಸ್ ಗೆ ತತ್ತರಿಸಿ ಹೋಗಿರುವ ಕರ್ನಾಟಕದಲ್ಲಿನ ಜಿಲ್ಲೆಗಳನ್ನು ಕೇಂದ್ರ ಸರ್ಕಾರ ಮೂರು ಝೋನ್ ಗಳಾಗಿ ವಿಂಗಡಣೆ ಮಾಡಿದ್ದು ಈ ಪೈಕಿ ರಾಜಧಾನಿ ಬೆಂಗಳೂರು ಸೇರಿದಂತೆ ಮೂರು ಜಿಲ್ಲೆಗಳು ರೆಡ್ ಝೋನ್ ನಲ್ಲಿವೆ ಎಂದು ತಿಳಿದುಬಂದಿದೆ.
ಆಯಾ ಜಿಲ್ಲೆಗಳಲ್ಲಿನ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆಗೆ ಅನುಗುಣವಾಗಿ ರಾಜ್ಯದ 30 ಜಿಲ್ಲೆಗಳನ್ನು ಈ ಮೂರು ಝೋನ್ ಗಳಲ್ಲಿ ವಿಂಗಡಣೆ ಮಾಡಲಾಗಿದೆ. ಈ ಪೈಕಿ ಕೆಂಪು ಝೋನ್ ನಲ್ಲಿ ಮೂರು ಜಿಲ್ಲೆಗಳಿದ್ದು, ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಕೆಂಪು ಝೋನ್ ನಲ್ಲಿವೆ.
ಕಿತ್ತಳೆ ಬಣ್ಣದ ಝೋನ್ ನಲ್ಲಿ 13 ಜಿಲ್ಲೆಗಳಿದ್ದು, ಬೆಳಗಾವಿ, ವಿಜಯಪುರ, ಕಲಬುರಗಿ, ಬಾಗಲಕೋಟೆ, ಮಂಡ್ಯ, ಬಳ್ಳಾರಿ, ಧಾರವಾಡ, ದಕ್ಷಿಣ ಕನ್ನಡ, ಬೀದರ್, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ತುಮಕೂರು ಮತ್ತು ಗದಗ ಜಿಲ್ಲೆಗಳಿವೆ.
ಗ್ರೀನ್ ಅಥವಾ ಹಸಿರು ಝೋನ್ ನಲ್ಲಿ 14 ಜಿಲ್ಲೆಗಳಿದ್ದು, ದಾವಣಗೆರೆ, ಉಡುಪಿ, ಯಾದಗಿರಿ, ರಾಯಚೂರು, ಕೊಪ್ಪಳ, ಹಾವೇರಿ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ರಾಮನಗರ, ಕೊಡಗ, ಕೋಲಾರ ಮತ್ತು ಚಾಮರಾಜನಗರ ಜಿಲ್ಲೆಗಳು ಹಸಿರು ವಲಯದಲ್ಲಿವೆ.
ಇನ್ನು ಕೆಂಪು ವಲಯವಾಗಿ ಗುರುತಿಸಿರುವ ಜಿಲ್ಲೆಗಳಲ್ಲಿ ಲಾಕ್‍ಡೌನ್ ನಿರ್ಬಂಧ ಮುಂದುವರಿಯಲಿದ್ದು, ಮೇ 3ರ ನಂತರವೂ ಲಾಕ್‌ಡೌನ್ ತೆರವುಗೊಳಿಸಲಾಗುವುದಿಲ್ಲ. ಅದೇ ವೇಳೆ ಜಿಲ್ಲೆಯೊಳಗೆ ಮತ್ತು ಅಂತರ್ ಜಿಲ್ಲಾ ಸಂಚಾರಕ್ಕೂ ನಿರ್ಬಂಧ ವಿಧಿಸಿದೆ. ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಾರ್ಯದರ್ಶಿಗಳಿಗೆ ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಪ್ರೀತಿ ಸುದಾನ್ ಪತ್ರ ಕಳಿಸಿದ್ದು, ಕೆಲವೊಂದು ಜಿಲ್ಲೆಗಳನ್ನು ಕೆಂಪು ವಲಯ ಮಾಡಬೇಕು ಎಂದು ಕೆಲವು ರಾಜ್ಯಗಳು ಬೇಡಿಕೆ ಮುಂದಿಟ್ಟಿವೆ.
ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 589ಕ್ಕೆ ಏರಿಕೆಯಾಗಿದ್ದು ಈ ಪೈಕಿ 23 ಮಂದಿ ಮೃತಪಟ್ಟಿದ್ದಾರೆ. ಅಂತೆಯೇ 251 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.