ರಾಜ್ಯ

ಗಂಗಾವತಿ: ತುಂಬು ಗರ್ಭಿಣಿಯನ್ನು ಅಲೆದಾಡಿಸಿ ಅಮಾನವೀಯತೆ ಮೆರೆದ ಸರ್ಕಾರಿ ವೈದ್ಯರು

Srinivasamurthy VN

ಗಂಗಾವತಿ: ಹೆರಿಗೆ ಉದ್ದೇಶಕ್ಕೆ ಸರ್ಕಾರಿ ಆಸ್ಪತ್ರೆಗೆ ತೆರಳಿದ ಬಡ ಕುಟುಂಬದ ತುಂಬು ಗರ್ಭಿಣಿ ಮಹಿಳೆಯೊಬ್ಬರನ್ನು ಕನಕಗಿರಿಯ ಸಮುದಾಯ ಆಸ್ಪತ್ರೆಯ ವೈದ್ಯರು ವಿನಾಕಾರಣ ಅಲೆದಾಡಿಸಿ ಅಮಾನವೀಯತೆ ತೋರಿದ ಘಟನೆ ಬೆಳಕಿಗೆ ಬಂದಿದೆ.

ಕನಕಗಿರಿಯಿಂದ ಗಂಗಾವತಿಗೆ, ಪುನಃ ಗಂಗಾವತಿಯಿಂದ ಕನಕಗಿರಿಗೆ ಹೀಗೆ ಸುಮಾರು 34 ಕಿ.ಮೀ ಅಲೆದಾಡಿದ ಮಹಿಳೆಯನ್ನು ಕನಕಗಿರಿಗೆ ಕರೆಯಿಸಿಕೊಂಡು ಸಮುದಾಯ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲಾಗಿದೆ. ಮಹಿಳೆ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ತಾಯಿ ಮತ್ತು  ಮಗುಆರೋಗ್ಯವಾಗಿದ್ದಾರೆ.

ಆದರೆ ಗರ್ಭಿಣಿ ಮಹಿಳೆಯನ್ನು ವಿನಾಕಾರಣಕ್ಕೆ ಅಲೆದಾಡಿಸಿದ್ದಕ್ಕೆ ಇದೀಗ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕನಕಗಿರಿ ಪಟ್ಟಣದ ಪದ್ಮಾವತಿ ಗುರುರಾಜ್ ಬಡಿಗೇರ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಪಟ್ಟಣದ ಆಸ್ಪತ್ರೆಗೆ ದಾಖಲಾಗಲು ಆಗಮಿಸಿದ್ದಾರೆ. ಆದರೆ ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅರವಳಿಕೆ ತಜ್ಞರಿಲ್ಲ ಎಂಬ ಕಾರಣಕ್ಕೆ ಅಲ್ಲಿನ ವೈದ್ಯರು ಗಂಗಾವತಿಗೆ ಶಿಫಾರಸ್ಸು ಮಾಡಿದ್ದಾರೆ. ಗಂಗಾವತಿಗೆ ಆಗಮಿಸಿದ ಮಹಿಳೆಯ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಆಕೆ ಜ್ವರದಿಂದ ಬಳಲುತ್ತಿರುವ ಹಿನ್ನೆಲೆ ಬಳ್ಳಾರಿಗೆ  ಶೀಫಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.

ಇದರಿಂದ ಬೇಸತ್ತ ಮಹಿಳೆಯ ಸಂಬಂಧಿಕರು ಇಲ್ಲಿನ ನಗರ ಠಾಣೆಯ ಪೊಲೀಸರ ಮೊರೆ ಹೋಗಿದ್ದಾರೆ. ಬಳಿಕ ಮಧ್ಯ ಪ್ರವೇಶಿಸಿದ ತಾಲ್ಲೂಕು ಆರೋಗ್ಯಾಧಿಕಾರಿ ಶರಣಪ್ಪ ವೈದ್ಯರನ್ನು ಸಂಪರ್ಕಿಸಿ, ಪುನಃ ಮಹಿಳೆಯನ್ನು ಕನಕಗಿರಿಗೆ ಕಳುಹಿಸಿಕೊಟ್ಟಿದ್ದಾರೆ. ರಜೆಯಲ್ಲಿದ್ದ ಅರವಳಿಕೆ ತಜ್ಞ  ಪ್ರಜ್ವಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಹಿಳೆಗೆ ಚಿಕಿತ್ಸೆ ನೀಡಿದ ಬಳಿಕ ಹೆರಿಗೆಯಾಗಿದೆ. ಘಟನೆ ಹಿನ್ನೆಲೆ ವಿನಾಕಾರಣ ಮಹಿಳೆಯನ್ನು ಅಲೆಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ವರದಿ: ಶ್ರೀನಿವಾಸ .ಎಂ.ಜೆ

SCROLL FOR NEXT