ರಾಜ್ಯ

ಚಾಮರಾಜನಗರ: ಕೊರೋನಾ ಭೀತಿಯಲ್ಲೂ ಮಾನವೀಯತೆ ಮೆರೆದ ಪೊಲೀಸರು, ಅನಾಥ ಶವಕ್ಕೆ ಸಂಸ್ಕಾರ

Srinivasamurthy VN

ಚಾಮರಾಜನಗರ: ಇಡೀ ರಾಜ್ಯ ಮಾರಕ ಕೊರೋನಾ ವೈರಸ್ ನಿಂದ ತತ್ತರಿಸುತ್ತಿದ್ದು, ಇಂತಹ ಹೊತ್ತಿನಲ್ಲೇ ವೈರಸ್ ಭೀತಿ ಹೊರತಾಗಿಯೂ ಚಾಮರಾಜನಗರ ಪೊಲೀಸರು ಅನಾಥ ಶವದ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹೌದು ಚಾಮರಾಜನಗರ ಜಿಲ್ಲೆಯ ಪುಣಜನೂರು ಬಳಿಯ ದೊಡ್ಡಮೂಡಹಳ್ಳಿಯಲ್ಲಿ ಕಾಡಾನೆ ದಾಳಿಯಿಂದ ಮೃತಪಟ್ಟ ಮಾನಸಿಕ ಅಸ್ವಸ್ಥನ ಶವಸಂಸ್ಕಾರವನ್ನು ಮಾಡುವ ಮೂಲಕ ರಾಮಸಮುದ್ರ ಪೊಲೀಸ್‌ ಠಾಣೆಯ ಎಎಸ್‌ಐ ಎಚ್‌.ಬಿ.ಮಾದೇಗೌಡ ಅವರ ನೇತೃತ್ವದ ತಂಡ  ಮಾನವೀಯತೆ ಮೆರೆದಿದೆ. ಅಂತ್ಯ ಸಂಸ್ಕಾರ ನಡೆಸಿದ ಮಾದೇಗೌಡ ಹಾಗೂ ಅವರಿಗೆ ಸಹಕರಿಸಿದ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ರಾಜೇಶ್‌ ಹಾಗೂ ಪುಣಜನೂರು ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ನಾಗನಾಯಕ ಅವರ ಕಾರ್ಯಕ್ಕೆ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ನಂತಹ ಸಾಮಾಜಿಕ  ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತ ಫೋಟೋಗಳು ಇದೀಗ ಭಾರಿ ವೈರಲ್ ಆಗುತ್ತಿದ್ದು, ಪೊಲೀಸರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿಸಂರಕ್ಷಿತಾರಣ್ಯ ಪ‍್ರದೇಶದ ಪುಣಜನೂರು ವನ್ಯಜೀವಿ ವಲಯದಲ್ಲಿರುವ ಆನೆಕಾರಿಡಾರ್‌ನಲ್ಲಿ ಸೋಮವಾರ ರಾತ್ರಿ ಕಾಡಾನೆಗಳು ಮಾನಸಿಕ ಅಸ್ವಸ್ಥನ ಮೇಲೆ ದಾಳಿ ಮಾಡಿದ್ದವು. ಮಂಗಳವಾರ 11.45ರ ಸುಮಾರಿಗೆ ಅದೇ  ಮಾರ್ಗದಲ್ಲಿ ಕಟ್ಟಿಗೆ ತರುತ್ತಿದ್ದ ವ್ಯಕ್ತಿಯೊಬ್ಬರು ಶವವನ್ನು ಕಂಡು ಪೊಲೀಸ್‌ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ರಾಮಸಮುದ್ರ ಠಾಣೆಯ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಆನೆ ದಾಳಿಯಿಂದ ಮೃತಪಟ್ಟಿರಬಹುದು ಎಂದು  ಶಂಕಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಅದು ಖಚಿತವಾಗಿತ್ತು. 

ಮೃತಪಟ್ಟ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಆ ಪ್ರದೇಶದಲ್ಲಿ ವರ್ಷದಿಂದೀಚೆಗೆ ಓಡಾಡುತ್ತಿದ್ದುದನ್ನು ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಗಮನಿಸಿದ್ದರು. ವಾರಸುದಾರರಿಲ್ಲದ ಶವವಾಗಿದ್ದರಿಂದ ಅಂತ್ಯಸಂಸ್ಕಾರ ಮಾಡಲು ಯಾರೂ ಮುಂದೆ ಬರಲಿಲ್ಲ. ಹಾಗಾಗಿ, ಮಾದೇಗೌಡ  ಅವರೇ ಮುಂದೆ ನಿಂತು ಮಂಗಳವಾರ ಸಂಜೆ ಅಂತಿಮ ಕಾರ್ಯ ಮಾಡಿದ್ದಾರೆ. 

ಕಾಡಿದ ಕೋವಿಡ್‌ ಭೀತಿ: ಶವ ಸಾಗಾಟಕ್ಕೆ ಪೊಲೀಸರ ಹರ ಸಾಹಸ
ಅಸಹಜ ಸಾವು ಆಗಿದ್ದರಿಂದ ಮರಣೋತ್ತರ ಪರೀಕ್ಷೆ ನಡೆಸಬೇಕಿತ್ತು. ಆದರೆ, ಕೋವಿಡ್‌ ಭೀತಿ ನಡುವೆ ಶವ ಸಾಗಿಸಲು ಯಾರೂ ಒಪ್ಪಲಿಲ್ಲ. ಕೊನೆಗೆ ಉಡಿಗಾಲದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ.ಉಮಾ ಅವರು ಶವ ಪತ್ತೆಯಾದ ಸ್ಥಳಕ್ಕೆ ಬಂದು ಮರಣೋತ್ತರ ಪರೀಕ್ಷೆ  ನಡೆಸಿದರು. ಬೇರೆ ಕಡೆಗೆ ತೆಗೆದುಕೊಂಡು ಹೋಗಲು ಯಾರೂ ಒಪ್ಪಲಿಲ್ಲ. ಹಾಗಾಗಿ, ಅಲ್ಲೇ ಹತ್ತಿರದಲ್ಲಿ ಶವ ಸಂಸ್ಕಾರ ನಡೆಸಲು ತೀರ್ಮಾನಿಸಿದೆವು. ಪುಣಜನೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ನಾಗನಾಯಕ ಅವರಿಗೆ ಮಾಹಿತಿ ನೀಡಿ, ಗುಂಡಿ ತೆಗೆಯುವುದಕ್ಕೆ ವ್ಯವಸ್ಥೆ  ಮಾಡುವಂತೆ ಕೇಳಿಕೊಂಡೆವು. ಅವರು ಜೆಸಿಬಿಯನ್ನು ಕಳಿಸಿದರು. ಅದರಲ್ಲಿ ಗುಂಡಿ ತೆಗೆದ ಬಳಿಕ, ಶವವನ್ನು ಇಳಿಸಲು ಸಹಾಯ ಮಾಡಲು ಯಾರೂ ಮುಂದೆ ಬರಲಿಲ್ಲ. ನಾನು, ನಮ್ಮ ಹೆಡ್‌ಕಾನ್‌ಸ್ಟೆಬಲ್‌ ರಾಜೇಶ್‌ ಹಾಗೂ ನಾಗನಾಯಕ ಅವರು ಸೇರಿ ಮೃತದೇಹವನ್ನು ದಫನ  ಮಾಡಿದೆವು. ಗುಂಡಿಯನ್ನು ಮುಚ್ಚಿದ ಬಳಿಕ ಸಮಾಧಿ ಮುಂದೆ ತೆಂಗಿನಕಾಯಿ ಒಡೆದು, ಊದುಕಡ್ಡಿ, ಕರ್ಪೂರ ಹಚ್ಚಿ ಮೂವರೂ ಪೂಜೆ ಮಾಡಿದೆವು ಎಂದು ಎಎಸ್‌ಐ ಮಾದೇಗೌಡ ಅವರು ತಿಳಿಸಿದ್ದಾರೆ.

SCROLL FOR NEXT