ರಾಜ್ಯ

ಭವಾನಿಕೊಪ್ಪಲು ಬಳಿ ಚಿರತೆಗಳು ಪ್ರತ್ಯಕ್ಷ; ಜನರಲ್ಲಿ ಆತಂಕ

Srinivas Rao BV

ಮಂಡ್ಯ: ರಸ್ತೆ ಪಕ್ಕದಲ್ಲಿಯೇ ಮೂರು ಚಿರತೆಗಳು ಶನಿವಾರ ರಾತ್ರಿ ಕಾಣಿಸಿಕೊಂಡಿದ್ದು ಜನತೆ ಭಯಭೀತರಾಗಿರುವ ಘಟನೆ ಮಂಡ್ಯತಾಲೂಕು ಬಸರಾಳು ಹೋಬಳಿ ಭವಾನಿ ಕೊಪ್ಪಲು ಗ್ರಾಮದ ಬಳಿ ನಡೆದಿದೆ.

ನಿನ್ನೆ ರಾತ್ರಿ ಭವಾನಿ ಕೊಪ್ಪಲು ಗ್ರಾಮದ ಯುವಕರಿಗೆ ದೊಡ್ಡಗರುಡನ ಹಳ್ಳಿಯಿಂದ ಭವಾನಿ ಕೊಪ್ಪಲು ಕಡೆಗೆ ಬೈಕ್ನಲ್ಲಿ ಹೋಗುತ್ತಿದ್ದಾಗ ರಸ್ತೆ ಪಕ್ಕದಲ್ಲಿಯೇ ಮೂರು ಚಿರತೆಗಳು ಕಾಣಿಸಿಕೊಂಡಿವೆ.ಬೈಕ್ ಲೈಟ್ನ ಬೆಳಕಿನಿಂದ ನೋಡುವ ಪ್ರಯತ್ನ ಮಾಡಿದಾಗ ಮನುಷ್ಯರು ಮಾತನಾಡುವ ಶಬ್ದ ಮತ್ತು ಬೆಳಕು ಕಂಡ ತಕ್ಷಣ ಪರಾರಿಯಾಗಿವೆ.

ರಾತ್ರಿ ವೇಳೆ ಹೋಗುತ್ತಿರುವಾಗ ಕಣ್ಣಿಗೆ ಕಂಡ ದೊಡ್ಡಗಾತ್ರದ ಮೂರು ಚಿರತೆಗಳ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಭವಾನಿಕೊಪ್ಪಲು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಆದರೆ ಚಿರತೆಗಳ ಹಾವಳಿ ಜಾಸ್ತಿಯಾಗಿರುವ ಬಗ್ಗೆ ವಿಷಯವನ್ನು ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ,ಇಲ್ಲಿಯವರೆಗೂ ಚಿರತೆಗಳ ಹಾವಳಿ ತಡೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳಿಯರು ಆಕ್ರೋಶವ್ಯಕ್ತಪಡಿಸಿದ್ದಾರೆ. ಜನಸಾಮಾನ್ಯರಿಗೆ ಹಾಗೂ ಜಾನುವಾರುಗಳ ಪ್ರಾಣಕ್ಕೆ ಈ ಚಿರತೆಗಳು ಸಂಚಕಾರ ತಂದರೆ ಮುಂದೇನುಗತಿ ಅಂತಾ ಆತಂಕವ್ಯಕ್ತಪಡಿಸಿರುವ ಸ್ಥಳೀಯರು ಒಂದು ವೇಳೆ ನಷ್ಟವಾದರೆ ಹಾಗೂ ಹಾನಿಯುಂಟಾದರೆ ಅರಣ್ಯಾಧಿಕಾರಿಗಳು ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳೇ ನೇರ ಹೊಣೆ ಹಾಗೂ ಜವಾಬ್ದಾರರು ಆಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇತ್ತೀಚೆಗೆ ಹೆಚ್ಚಾಗಿರುವ ಚಿರತೆಯ ಹಾವಳಿಯಿಂದಾಗಿ ಭವಾನಿಕೊಪ್ಪಲು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಯ ರೈತರು, ಮಕ್ಕಳು ಮತ್ತು ಮಹಿಳೆಯರು ಭಯಬೀತರಾಗಿದ್ದು ತಕ್ಷಣವೇ ಚಿರತೆಗಳ ಸೆರೆಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

-ನಾಗಯ್ಯ 

SCROLL FOR NEXT