ರಾಜ್ಯ

ಪಡಿತರ ಅಕ್ರಮ: 33 ಅಂಗಡಿಗಳ ಲೈಸೆನ್ಸ್ ರದ್ದು

Shilpa D

ಬೆಂಗಳೂರು: ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪಡಿತರ ವಿತರಿಸುತ್ತಿರುವ ಆಹಾರ ಧಾನ್ಯಗಳನ್ನು ಅಕ್ರಮ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಹಾರ ಸಚಿವ ಗೋಪಾಲಯ್ಯ ಎಚ್ಚರಿಕೆ ನೀಡಿದ್ದಾರೆ.

ಬಡವರಿಗೆ ನೀಡುತ್ತಿರುವ ಪಡಿತರ ವಿತರಣೆಯನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿರುವ ದೂರು ಬಂದಿದೆ. ಸರ್ಕಾರ ಉಚಿತವಾಗಿ ವಿತರಿಸುತ್ತಿರುವ ಅಕ್ಕಿವನ್ನು ಕೆ.ಜಿಗೆ 12ರಿಂದ 15 ರೂಗಳಿಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.

ಬಡವರಿಗೆ ಕೋಟ್ಯಂತರ ರೂ. ವ್ಯಯ ಮಾಡಿ ಸರ್ಕಾರ ಪಡಿತರ ಒದಗಿಸುತ್ತಿದೆ. ಆದರೆ ಇದನ್ನು ದುರ್ಬಳಕೆ ಮಾಡಿಕೊಳ್ಳುವುದು ತಪ್ಪು. ದುರ್ಬಳಕೆ ತಡೆಯಲು ಕಾನೂನು ಜಾರಿ ಮಾಡುವ ಸಂಬಂಧ ಮುಖ್ಯ ಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು. 

ಪಡಿತರ ಬೇಡ ಎಂದರೆ ಅದನ್ನು ಅಂಗಡಿಯಲ್ಲೇ ಬಿಟ್ಟುಬಿಡಿ ಅದರಿಂದ ಬಡವರಿಗೆ ಅನುಕೂಲವಾಗುತ್ತದೆ. ಅದು ಬಿಟ್ಟು ಉಚಿತವಾಗಿ ಪಡಿತರ ಪಡೆದು ಅದನ್ನು ಮಾರಾಟ ಮಾಡುವುದು ಸರಿಯಲ್ಲ. ಇಂತಹವರ ಪಡಿತರ ಚೀಟಿಯನ್ನ ರದ್ದು ಮಾಡುವುದಾಗಿಯೂ ಅವರು ಎಚ್ಚರಿಕೆ ನೀಡಿದರು.

ಪಡಿತರ ದುರ್ಬಳಕೆ ಮಾಡಿಕೊಂಡಿರುವ 499 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. 33 ಅಂಗಡಿಗಳ ಲೈಸೆನ್ಸ್ ರದ್ದು ಮಾಡಿದ್ದೇವೆ ಎಂದು ಸಚಿವರು ಹೇಳಿದರು. ಇನ್ನು ಗುಲ್ಬರ್ಗ, ಮೈಸೂರು ಮತ್ತು ದಾವಣಗೆರೆ ಖಾಸಗಿ ಗೋದಾಮುಗಳ ಮೇಲೆ ನಮ್ಮ ಇಲಾಖೆ ಅಧಿಕಾರಿಗಳು, ಮತ್ತು ಪೊಲೀಸರು ದಾಳಿ ನಡೆಸಲಾಗಿದೆ. 

ಸಾವಿರಾರು ಕ್ವಿಂಟಾಲ್ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಇದು ನಮ್ಮ ಸರಕಾರದ ಅಕ್ಕಿಯೋ ಇಥವಾ ಬೇರೆ ರಾಜ್ಯದ ಅಕ್ಕಿ ಎಂದು ತನಿಖೆ ನಡೆಸಲು, ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಪ್ಪಿತಸ್ಥರು ಎಷ್ಟೇ ಪ್ರಭಾವಿಯಾಗಳಾಗಿದ್ದರೂ ಚಿಂತಿಸುವುದಿಲ್ಲ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಸಚಿವರು ಎಚ್ಚರಿಸಿದರು.

SCROLL FOR NEXT