ಮೈಸೂರು: ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆಗಳನ್ನು ಖಂಡಿಸಿ, ಸೂಕ್ತ ರಕ್ಷಣೆಗೆ ಆಗ್ರಹಿಸಿ ಹಾಗೂ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದವರು ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕೊರೋನಾ ಲಾಕ್'ಡೌನ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಉತ್ತಮವಾಗಿ ಕಾರ್ಯನಿರ್ವಹಿಸಿ ವೈರಸ್ ಹರಡುವಿಕೆ ತಡೆಗಟ್ಟಲು ಶ್ರಮಿಸಿದರು.
ಕಳೆದ 2 ತಿಂಗಳಿನಿಂದ ಅವಿರತ ಸೇವೆಯಲ್ಲಿರುವ ಫ್ರಂಟ್ ಲೈನ್ ವಾರಿಯರ್ಸ್ ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆಗಳು ದಿನದಿಂದ ದಿನಕ್ಕೆ ಹಚ್ಚುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಫ್ರಂಟ್ ಲೈನ್ ವಾರಿಯರ್ಸ್ ಆಶಾ ಕಾರ್ಯಕರ್ತೆಯರ ಮೇಲೆ ದೈಹಿಕ ಹಲ್ಲೆ ಮಾಡಿದವರನ್ನು ಶಿಕ್ಷಿಸಿ, ಹಲ್ಲೆಗೆ ಒಳಗಾದ ಆಶಾಗೆ ಸೂಕ್ತ ಪರಿಹಾಸ ನೀಡಬೇಕು. ಮಾರ್ಚ್ ತಿಂಗಳಿನಿಂದ ಕೊರೋನಾ ಕಾರ್ಯ ನಿಯೋಜನೆ ಇರುವಷ್ಟು ಅವಧಿಗೆ ವಿಶೇಷ ಪ್ಯಾಕೇಜ್ ಮಾಸಿಕ ರೂ.10 ಸಾವಿರ ಘೋಷಿಸಬೇಕು. ಅಗತ್ಯ ಇರುವಷ್ಟು ಮಾಸ್ಕ್ ಹಾಗೂ ಸ್ಯಾನಿಟೈಸರ್, ಗ್ಲೌಸ್ಗಳನ್ನು ನೀಡಿ ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದರು.
ಪಾನಮತ್ತರಾಗಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗೈದವರಿಗೆ ಉಗ್ರ ಶಿಕ್ಷೆ ನೀಡಬೇಕು. ಮದ್ಯ ನಿಷೇಧ ಮಾಡಬೇಕು. ಕೊರೋನಾ ದಿಂದಾಗಿ ಸಾವಿಗೀಡಾದ ಆಶಾ ಕುಟುಂಬಕ್ಕೆ ನೀಡುವ ರೂ.50 ಲಕ್ಷ ವಿಮಾ ಸೌಲಭ್ಯವನ್ನು ಕೊರೋನಾ ಸೇವೆಯಲ್ಲಿರುವಾಗ ಸಾವಿಗೀಡಾದ ಆಶಾ ಕುಟುಂಬಕ್ಕೂ ನೀಡಬೇಕು ಎಂದು ಆಗ್ರಹಿಸಿದರು.