ಬೆಂಗಳೂರು: ಶಿರಾ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ಬಳಿಕ ಉಭಯಕ್ಷೇತ್ರಗಳ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೊರೋನಾ ಸೋಂಕು ಪರೀಕ್ಷೆ ನಡೆಸಲು ಸರ್ಕಾರ ನಿರ್ಧರಿಸಿದೆ.
ಉಪಚುನಾವಣೆ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಉಭಯ ಕ್ಷೇತ್ರಗಳಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗಿರುವುದು ಕಂಡು ಬಂದಿದೆ. ಹೀಗಾಗಿ ಮತದಾನದ ಬಳಿಕ ಹೆಚ್ಚು ಸೋಂಕು ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಡಳಿತಗಳು ಅಧಿಕೃತವಾಗಿ ತಿಳಿಸಿದೆ.
ತುಮಕೂರು ಜಿಲ್ಲಾಡಳಿತ ಇದೇ ತಿಂಗಳ 5 ರಂದು ಶಿರಾ ಕ್ಷೇತ್ರದ ಜನರಿಗೆ ರ್ಯಾಪಿಡ್ ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಅಂದು ಶಿರಾ ತಾಲೂಕಿನ ಎಲ್ಲಾ ಗ್ರಾಮಪಂಚಾಯತಿಗಳಲ್ಲಿ ರ್ಯಾಪಿಡ್ ಪರೀಕ್ಷೆ ನಡೆಯಲಿದೆ.
ಪಿಡಿಒ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ತಂಡದ ನೇತೃತ್ವದಲ್ಲಿ ಈ ಪರೀಕ್ಷೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಇನ್ನು ರಾಜರಾಜೇಶ್ವರಿ ನಗರದಲ್ಲಿ ಕಳೆದ 15 ದಿನಗಳಿಂದ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಜನ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ, ಮಾಸ್ಕ್ ಧರಿಸದೆ ಇರುವುದರಿಂದ ಸೋಂಕು ಹಬ್ಬುವುದು ಹೆಚ್ಚಾಗುತ್ತಿದೆ. ಉಪ ಚುನಾವಣೆ ಮುಗಿದ ಮೇಲೆ ಹೆಚ್ಚು ಸೋಂಕು ಪರೀಕ್ಷಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಮಾಹಿತಿ ನೀಡಿದ್ದಾರೆ.