ರಾಜ್ಯ

ಬೆಂಗಳೂರು ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್ ರಾಜ್ ಪತ್ತೆಗಾಗಿ ಶೋಧ ತೀವ್ರ, ಶೀಘ್ರದಲ್ಲೇ ಆಂಧ್ರಕ್ಕೆ ಸಿಸಿಬಿ ತಂಡ

Manjula VN

ಬೆಂಗಳೂರು: ಡಿಜೆ ಹಳ್ಳಿ  ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣ ಪ್ರಮುಖ ಆರೋಪಿಯಾಗಿರುವ ಮಾಜಿ ಮೇಯರ್ ಸಂಪರ್ ರಾಜ್ ಪತ್ತೆಗಾಗಿ ಶೋಧ ಕಾರ್ಯ ತೀವ್ರಗೊಂಡಿದ್ದು, ಶೀಘ್ರದಲ್ಲಿಯೇ ಸಿಸಿಬಿ ಪೊಲೀಸರು ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 

ಕೊರೋನಾ ಸೋಂಕು ಕಾರಣ ನೀಡಿ ಆಸ್ಪತ್ರೆಯಲ್ಲಿಯೇ ಉಳಿದಿದ್ದ ಸಂಪತ್ ರಾಜ್ ಅವರು ರಾತ್ರೋರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ನಾಪತ್ತೆಯಾಗಿದ್ದಾರೆ. ಈಗಾಗಲೇ ಸಿಸಿಬಿ ಪೊಲೀಸರು ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ, ಸಂಪತ್ ರಾಜ್ ಕುರಿತು ಯಾವುದೇ ಸುಳಿವುಗಳು ಪತ್ತೆಯಾಗಿರಲಿಲ್ಲ. 

ಸಂಪತ್ ರಾಜ್ ಪತ್ತೆಗಾಗಿ ಈಗಾಗಲೇ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡ ಕೇರಳದಲ್ಲಿ ಹುಡುಕಾಟ ನಡೆಸಿದೆ. ಮತ್ತೊಂದು ತಂಡ ಮಹಾರಾಷ್ಟ್ರದಲ್ಲಿ ಹುಡುಕಾಟ ನಡೆಸಿದೆ. ಈಗಾಗಲೇ ಪ್ರಕರಣ ಸಂಬಂಧ ಸಂಪತ್ ರಾಜ್ ಅವರ ಸಂಬಂಧಿಕರನ್ನೂ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. 

ತಾಂತ್ರಿಕ ತಂಡ ಸಂಪತ್ ರಾಜ್ ಅವರ ಎಲ್ಲಾ ಚಟುವಟಿಕೆಗಳ ಮೇಲೆ ಕಣ್ಗಾವಲಿರಿಸಿದೆ. ಪ್ರತೀನಿತ್ಯ ಒಂದೊಂದು ರಾಜ್ಯಕ್ಕೆ ಸಂಪತ್ ರಾಜ್ ಪ್ರಯಾಣಿಸುತ್ತಿರುವುದು ಕಂಡು ಬಂದಿದೆ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ನಡುವೆ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು, ಸಂಪತ್ ರಾಜ್ ಅವರನ್ನು ಸದ್ಯದಲ್ಲಿಯೇ ಬಂಧಿಸುತ್ತೇವೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಬಂಧನಕ್ಕೆ ಈಗಾಗಲೇ 4 ತಂಡಗಳು ಹುಡುಕಾಟ ನಡೆಸುತ್ತಿವೆ ಎಂದು ಹೇಳಿದ್ದಾರೆ. 

SCROLL FOR NEXT