ರಾಜ್ಯ

13 ವರ್ಷದ ಪ್ರೇಮ, ಎರಡು ಗರ್ಭಪಾತ: ಮದುವೆ ದಿನ ನಾಪತ್ತೆಯಾದ 'ವರ'ನ ಮನೆ ಮುಂದೆ ಯುವತಿ ಪ್ರತಿಭಟನೆ!

Raghavendra Adiga

ಉಡುಪಿ: ಕಳೆದ 13 ವರ್ಷಗಳಿಂದ ಪ್ರೀತಿಸಿದ್ದ ಯುವಕ ಮದುವೆಯ ದಿನವೇ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಇದೀಗ ಯುವತಿಯ ಮನೆಯವರು ಕಾಣೆಯಾಗಿರುವ "ವರ"ನಿಗಾಗಿ ಪೋಲೀಸ್ ಠಾಣೆ ಮೆಟ್ಟಿಲೇರಿದ್ದಾರೆ

ಸುದೀರ್ಘ ಕಾಲದಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಪರ್ಕಳದ ಗಣೇಶ್ ಹಾಗೂ ಮಣಿಪಾಲದ ಯುವತಿ ವಿವಾಹವಾಗಲು ತೀರ್ಮಾನಿಸಿದರು.  ಪ್ರೀತಿಸುತ್ತಿದ್ದ ಜೋಡಿಯ ಮದುವೆಗೆ ಕಡೆಗೂ ಮನೆಯವರೆಲ್ಲಾ ಒಪ್ಪಿಗೆ ಸೂಚಿಸಿದ್ದು ವಿವಾಹ ನಿಕ್ಕಿಯಾಗಿತ್ತು. ಆದರೆ ವಿವಾಹದ ದಿನವೇ ಗಣೇಶ್ ಕಾಣೆಯಾಗಿದ್ದಾನೆ. ಈ ಕಾರಣ ಮದುವೆ ನಿಂತು ಹೋಗಿದ್ದು ಯುವತಿ ಗಣೇಶ್ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾಳೆ.

13 ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೆ ಇಬ್ಬರ ನಡುವೆ ದೈಹಿಕ ಸಂಪರ್ಕ ಸಹ ಏರ್ಪಟ್ಟಿತ್ತು ಎಂದು ಹೇಳಲಾಗುತ್ತದೆ. ಯುವತಿ ಇದು ನಿಜವಾದ ಪ್ರೀತಿ ಎಂದು ನಂಬಿದ್ದಳು ಮತ್ತು ಗಣೇಶ್ ಆಕೆಯನ್ನು ಒಂದು ದಿನ ಮದುವೆಯಾಗುವುದಾಗಿ ಖಚಿತಪಡಿಸಿದ್ದ ಕಾರಣ ಆಕೆ ಅವನ ಮಾತಿಗೆ ಒಪ್ಪಿದ್ದಳು.

ಈ ಸಂಬಂಧದ ಪರಿಣಾಮವಾಗಿ ಯುವತಿ ಎರಡು ಬಾರಿ ಗರ್ಭಿಣಿಯಾಗಿದ್ದಳು. ಆದರೆ ಗಣೇಶ್ ಎರಡೂ ಬಾರಿ ಗರ್ಭಪಾತ ಮಾಡಿಸುವಂತೆ ಹೇಳಿದ್ದನು.  ಆದರೆ ಆತನು ಯುವತಿಯನ್ನಿನ್ನೂ ಮದುವೆಯಾಗಿರಲಿಲ್ಲ.ನಂತರ,ಯುವತಿಯ ಒತ್ತಡಕ್ಕೆ ಮಣಿದ ಗಣೇಶ್ ಮದುವೆಗೆ ಸಿದ್ಧರಾಗಿರುವಂತೆ ವರ್ತಿಸಿದರು ಯುವತಿಯ ಕುಟುಂಬ ಕೂಡ ಮೈತ್ರಿಗೆ ಒಪ್ಪಿಕೊಂಡಿತು. ಗಣೇಶ್ ನವೆಂಬರ್ 6ರಂದು ವಿವಾಹವಾಗಲು ಒಪ್ಪಿದ್ದನು.  ಅದರಂತೆ ವಿವಾಹ ಪೂರ್ವದ ಎಲ್ಲಾ ಆಚರಣೆಗಳೂ ನಡೆದಿದ್ದವು. ಆದರೆ ಗಣೇಶ್ ನವೆಂಬರ್ 4 ರಂದು ಇನ್ನೊಬ್ಬ ಹುಡುಗಿಯೊಂದಿಗೆ ರಹಸ್ಯವಾಗಿ ವಿವಾಹವಾಗಲು ತಯಾರಾಗಿದ್ದ.

ಯುವತಿ ಈ ಯೋಜನೆಯನ್ನು ಅರಿತು ಮಧ್ಯಪ್ರವೇಶಿಸಿದ್ದಳು.ಅಲ್ಲದೆ ಆ "ಮದುವೆ"ಯನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಳು.  ಆ ನಂತರ ಗಣೇಶ್ ತನ್ನ ದೀರ್ಘಾವಧಿಯ ಪ್ರೇಮಿಯನ್ನು ನವೆಂಬರ್ 6 ರಂದು ಮದುವೆಯಾಗಲು ಒಪ್ಪಿಕೊಂಡನು, ಆದರೆ  ಮದುವೆಯ ದಿನದಂದು, ವಧು ಸಂಪೂರ್ಣವಾಗಿ ಅಲಂಕರಿಸಿಕೊಂಡು ವಿವಾಹ ಮಂಟಪಕ್ಕೆ ಆಗಮಿಸಿದ್ದಾಗ "ವರ" ಗನೇಶ್ ಅಲ್ಲಿರಲಿಲ್ಲ.ಯುವತಿಯ ಕುಟುಂಬ ಸದಸ್ಯರು ಆತನ ಮನೆಗೆ ಹೋಗಿ ಆತ ನಾಪತ್ತೆಯಾಗಿದ್ದನ್ನು ಖಚಿತಪಡಿಸಿಕೊಂಡಿದ್ದಾರೆ. ಆತನ ಮೊಬೈಲ್ ಸಹ ಸ್ವಿಚ್ ಆಫ್ ಆಗಿತ್ತು. ಯುವತಿ ಆತನನ್ನು ಪತ್ತೆ ಮಾಡಲು ಮಾಡಿರುವ ಎಲ್ಲಾ ಪ್ರಯತ್ನ ವಿಫಲವಾದ ನಂತರ, ಅವನ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಾಳೆ. ಕಳೆದ ಎರಡು ದಿನಗಳಿದ  ಯುವತಿ ಕುಟುಂಬ ಗಣೇಶ್ ಮನೆ ಎದುರು ಪ್ರತಿಭಟನೆ ನಡೆಸುತ್ತಿದ್ದರೂ ಸಹ  ಆತನ ಸುಳಿವಿಲ್ಲ. ಹಾಗಾಗಿ ಇದೀಗ ಯುವತಿಯ ಕುಟುಂಬ ಮಣಿಪಾಲ ಪೋಲೀಸ್ ಠಾಣೆ ಮೆಟ್ಟಿಲೇರಿದೆ.
 

SCROLL FOR NEXT