ರಾಜ್ಯ

ಮಹಿಳೆಯರ ಸುರಕ್ಷತೆಗೆ ಆದ್ಯತೆ: ಆ್ಯಪ್ ಅಭಿವೃದ್ಧಿಗೆ ಸಂಪುಟ ಅನುಮೋದನೆ

Shilpa D

ಬೆಂಗಳೂರು: ನಿರ್ಭಯಾ ಯೋಜನೆಯಡಿ ಕೆಎಸ್ ಆರ್ ಟಿಸಿ ಬಸ್ಸುಗಳಲ್ಲಿ ಸಂಚರಿಸುವ ಮಹಿಳೆಯರ ಸುರಕ್ಷತೆಗಾಗಿ ‘ರಿಯಲ್‌ ಟೈಮ್‌’ ಮಾಹಿತಿ ಒದಗಿಸುವ ಆ್ಯಪ್‌ವೊಂದನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. 

ಕೇಂದ್ರ ಸರ್ಕಾರದ ‘ನಿರ್ಭಯಾ’ ನಿಧಿಯನ್ನು ಬಳಸಿಕೊಂಡು ಈ ಯೋಜನೆ ಜಾರಿ ಮಾಡುತ್ತಿದ್ದು, ಸುಮಾರು 5 ಸಾವಿರ ಕೆಎಸ್ ಆರ್ ಟಿಸಿ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ನಿರ್ಭಯಾ ನಿಧಿಯಡಿ ರು 56 ಕೋಟಿ ಇದ್ದು, 40 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಇದರಡಿ ಮಹಿಳೆಯರ ಸುರಕ್ಷತೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಶೇ 60 ರಷ್ಟು ರಾಜ್ಯ ಸರ್ಕಾರ ಶೇ 40 ಹಣ ಒದಗಿಸುತ್ತವೆ ಎಂದು ಹೇಳಿದರು. 

ನಗರದ ಉದ್ದಗಲಕ್ಕೂ ಸಂಚರಿಸುವ ಬಸ್‌ಗಳ ವಿವರ, ಸೀಟಿನ ಲಭ್ಯತೆ ಬಗ್ಗೆ ಮಾಹಿತಿ, ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ ಪ್ಯಾನಿಕ್ ಬಟನ್‌ ಕೂಡಾ ಇರುತ್ತದೆ. ಒಟ್ಟು 500 ಬಸ್‌ ನಿಲ್ದಾಣಗಳಲ್ಲಿ (ಪಿಐಎಸ್) ಪ್ರದರ್ಶಕ ವ್ಯವಸ್ಥೆ 3 ಸಾವಿರ ಮಹಿಳೆಯರಿಗೆ ತರಬೇತಿ ಯೋಜನೆಯನ್ನೂ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿಧಾಮಗಳ ಸುತ್ತಮುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಕೇಂದ್ರ ಸರ್ಕಾರ ಶಿಫಾರಸು ಮಾಡುವ ಮತ್ತು ಡಾ.ಕಸ್ತೂರಿ ರಂಗನ್ ವರದಿಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಂಪುಟ ಉಪಸಮಿತಿ ರಚಿಸಲು ತೀರ್ಮಾನಿಸಲಾಯಿತು. ಈ ಸಮಿತಿಯಲ್ಲಿ ಅರಣ್ಯ ಸಚಿವರು, ಕಂದಾಯ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು ಸೇರಿ ಒಟ್ಟು ಆರು ಸಚಿವರು ಸದಸ್ಯರಾಗಿರುತ್ತಾರೆ. ಅರಣ್ಯ ಸಚಿವರು ಇದರ ಅಧ್ಯಕ್ಷರಾಗಿರುತ್ತಾರೆ. ಅರಣ್ಯ ಸಚಿವರು ಬದಲಾವಣೆ ಆಗಿರುವ ಕಾರಣ ಸಂಪುಟ ಉಪಸಮಿತಿ ಪುನರ್‌ ರಚನೆ ಮಾಡಲಾಗಿದೆ.

60 ಕೋಟಿ ರೂ.ಗಳ ವೆಚ್ಚದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ ಟೆಕ್ ಪಾರ್ಕ್ ಸ್ಥಾಪಿಸಲು ಸಂಪುಟ ಅನುಮೋದನೆ ನೀಡಿತು. ಚರ್ಚ್‌ ಸ್ಟ್ರೀಟ್‌ನ ಸೊಬಗು ಇನ್ನಷ್ಟು ಹೆಚ್ಚಿಸುವ ಯೋಜನೆಗೆ ಒಪ್ಪಿಗೆ. ಅಂತಾರಾಷ್ಟ್ರೀಯ ಮಟ್ಟದ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲಾಗುವುದು. ಇದಕ್ಕಾಗಿ 18.72 ಕೋಟಿ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಿಎ ನಿವೇಶನಗಳನ್ನು ಗುತ್ತಿಗೆ ಪಡೆದಿರುವ ವಿವಿಧ ಸಂಘ ಸಂಸ್ಥೆಗಳು ಬಾಕಿ ಪಾವತಿಸಲು ಮುಂದಾದರೆ ಶೇ 50 ರಷ್ಟು ಬಡ್ಡಿ ಮನ್ನಾ ಮಾಡಲು ತೀರ್ಮಾನಿಸಲಾಯಿತು.

SCROLL FOR NEXT