ರಾಜ್ಯ

ಏರ್‌ಪೋರ್ಟ್‌ ಬಸ್‌ಗಳಿಗಾಗಿ ಆನ್‌ಲೈನ್ ಬುಕಿಂಗ್ ಸೇವೆ ಅವಕಾಶ ಕಲ್ಪಿಸಿದ ಬಿಎಂಟಿಸಿ

Manjula VN

ಬೆಂಗಳೂರು: 2008ರ ಮೇ ತಿಂಗಳಿನಲ್ಲಿ ಪ್ರಾರಂಭವಾದ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ವಾಯುವಜ್ರ ಬಸ್‌ಗಳನ್ನು ಆನ್‌ಲೈನ್'ನಲ್ಲಿ ಬುಕ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. 

ಮುಂದಿನ ವಾರ ಈ ಸೇವೆ ಕಾರ್ಯಾರಂಭಗೊಳ್ಳುವ ಸಾಧ್ಯತೆಗಳಿವೆ. ಪ್ರಯಾಣದ ದಿನದ ಒಂದು ತಿಂಗಳಿಗೂ ಮೊದಲು ಬುಕಿಂಗ್ ಆರಂಭಿಸಲಾಗುತ್ತದೆ. ನಿರ್ಗಮನಕ್ಕೂ 30 ನಿಮಿಷಗಳಿಗೂ ಮುನ್ನ ಬುಕಿಂಗ್ ಕ್ಲೋಸ್ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಕೆಎಸ್‌ಆರ್‌ಟಿಸಿ ಅವತಾರ್ ಪ್ಲಾಟ್‌ಫಾರ್ಮ್‌ನಲ್ಲಿ ಬುಕಿಂಗ್ ಆರಂಭಿಸಲಾಗುತ್ತದೆ. ಮುಂಗಡ ಟಿಕೆಟ್ ಖರೀದಿಸಿದರೆ ಪ್ರಯಾಣಿಕರು ಬಸ್‌ಗಾಗಿ ಕಾಯುವ ಅವಕಾಶವಿರುವುದಿಲ್ಲ. ವಿಮಾನ ನಿಲ್ದಾಣಕ್ಕೆ ಸೂಕ್ತ ಸಮಯಕ್ಕೆ ಹೋಗುತ್ತದೆಯೇ ಇಲ್ಲವೇ, ಬಸ್ ಸಿಗುತ್ತದೆಯೋ ಇಲ್ಲವೋ ಎಂಬ ಆತಂಕ ಕೂಡ ಪ್ರಯಾಣಿಕರಲ್ಲಿ ಇರುವುದಿಲ್ಲ ಎಂದು ತಿಳಿಸಿದ್ದಾರೆ. 

ಕ್ಯಾಬ್‌ಗಳಿಗೆ ಹೋಲಿಸಿದರೆ ಅಗ್ಗದ ವೆಚ್ಚದಿಂದಾಗಿ ವಿಮಾನ ನಿಲ್ದಾಣದ ಬಸ್‌ಗಳು ಹೆಚ್ಚು ಜನಪ್ರಿಯವಾಗಿವೆ. ಸಾಮಾನ್ಯವಾಗಿ ಕ್ಯಾಬ್'ಗಳು ವಿಮಾನ ನಿಲ್ದಾಣಕ್ಕೆ ತೆರಳಲು ರೂ.800ರಿಂದ ರೂ.2,000ವರೆಗೂ ಪಡೆಯುತ್ತವೆ. ಆದರೆ, ಬಸ್ ಗಳಲ್ಲಿ ರೂ.100-320 ಆಗುತ್ತದೆ.
 
ಕೊರೋನಾ ಪರಿಣಾಮ ಮಾರ್ಚ್ 23ರಿಂದ ವಿಮಾನ ನಿಲ್ದಾಣಕ್ಕೆ ತೆರಳುವ ಬಸ್'ಗಳ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಜೂನ್.3ರಿಂದ ಮರಳಿ ಸೇವೆಗಳನ್ನು ಆರಂಭಿಸಲಾಗಿತ್ತು. ಲಾಕ್ಡೌನ್'ಗೂ ಮುನ್ನ ಪ್ರತೀನಿತ್ಯ 768 ಟ್ರಿಪ್'ಗಳು ತೆರಳುತ್ತಿದ್ದ ಬಸ್ ಗಳು ಇದೀಗ 335 ಟ್ರಿಪ್ ಗಳನ್ನು ನಡೆಯುತ್ತಿವೆ. 

2020 ರ ಜನವರಿಯಲ್ಲಿ ಪ್ರತಿದಿನ 15,200 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅಕ್ಟೋಬರ್‌ನಲ್ಲಿ ಈ ಸಂಖ್ಯೆ ದಿನಕ್ಕೆ 4,603 ಇಳಿದಿದೆ. 

ಕೊರೋನಾ ಸಾಂಕ್ರಾಮಿಕ ರೋಗದ ಬಳಿಕ ವಿಮಾನಗಳಲ್ಲಿ ಪ್ರಯಾಣಿಸುವ ಜನರ ಸಂಖ್ಯೆ ಕೂಡ ಕಡಿಮೆಯಾಗಿದ್ದು, ಸಾರಿಗೆ ಬಸ್ ಗಳ ಬಳಕೆ ಮಾಡುವ ಜನರ ಸಂಖ್ಯೆ ಕೂಡ ಕಡಿಮೆಯಾಗಿದೆ. ವೈಟ್‌ಫೀಲ್ಡ್ ಟಿಟಿಎಂಸಿ, ಬನಶಂಕರಿ ಮತ್ತು ಕೆ ಆರ್ ಪುರಂನ ವಾಯು ವಜ್ರಾ ಮಾರ್ಗಗಳಲ್ಲಿ ಹೆಚ್ಚು ಜನರು ಪ್ರಯಾಣಿಸದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ವಾಯುವಜ್ರ ಬಸ್'ಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. 

ಈ ನಡುವೆ ನಿಗಮದ ಆದಾಯ ಕೂಡ ಮೂರನೇ ಒಂದು ಭಾಗಕ್ಕೆ ಕುಸಿತ ಕಂಡಿದೆ. ಟಿಕೆಟ್ ದರದಿಂದ ಕಳೆದ ಜನವರಿ ತಿಂಗಳಿನಲ್ಲಿ ರೂ.9.48 ಕೋಟಿ ಆದಾಯ ಗಳಿಸಿದ್ದ ನಿಗಮವು ಅಕ್ಟೋಬರ್ ನಲ್ಲಿ ರೂ.3.22 ಕೋಟಿಗೆ ಕುಸಿದಿದೆ. ಇದೀಗ ವಿಮಾನಗಳಲ್ಲಿ ಪ್ರಯಾಣಿಸುತ್ತಿರುವ ಜನರ ಸಂಖ್ಯೆ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದ್ದು, ಬಸ್ ಗಳ ಸೇವೆ ಬಳಕೆ ಕೂಡ ಹೆಚ್ಚಳವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

SCROLL FOR NEXT