ಬೆಂಗಳೂರು: ರಾಜ್ಯ ಇಂಧನ ಇಲಾಖೆಯು ರಾಜ್ಯದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಉತ್ಪಾದನೆ ಕಡಿಮೆ ಮಾಡಿ ಉದ್ದೇಶಪೂರ್ವಕವಾಗಿ ಬೇರೆ ರಾಜ್ಯಗಳಿಂದ ಹೆಚ್ಚುವರಿ ದರಕ್ಕೆ ವಿದ್ಯುತ್ ಖರೀತಿಸುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಬರೋಬ್ಬರಿ ರೂ.15 ಸಾವಿರ ಕೋಟಿ ನಷ್ಟ ಉಂಟಾಗಿದ್ದು , ವಿದ್ಯುತ್ ದರ ಏರಿಕೆ ಮೂಲಕ ನಷ್ಟವನ್ನು ಗ್ರಾಹಕರ ಮೇಲೆ ಹೊರಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಜ್ಯದ ಬೊಕ್ಕಸಕ್ಕೆ ರೂ.15 ಸಾವಿರ ಕೋಟಿ ನಷ್ಟ ಉಂಟಾಗಿದೆ. ಈ ಹೊರೆಯನ್ನು ಗ್ರಾಹಕರ ಮೇಲೆ ಹಾಕಿರುವುದು ಅಕ್ಷಮ್ಯ ಹಾಗೂ ಅಮಾನವೀಯ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಸೌರ ವಿದ್ಯುತ್ ಪಾರ್ಕ್ ಮತ್ತು ವಿದ್ಯುತ್ ಘಟಕಗಳ ಸ್ಥಾಪನೆ ಮೂಲಕ ಬೇಡಿಕೆಗಿಂತ ಹೆಚ್ಚು ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹೀಗಿದ್ದರೂ ಹೊರ ರಾಜ್ಯಗಳಿದ ವಿದ್ಯುತ್ ಖರೀದಿಸುವ ದೀರ್ಘಾವಧಿ ಒಪ್ಪಂದವನ್ನು ರದ್ದುಪಡಿಸದೆ ಹೆಚ್ಚುವರಿ ದರಕ್ಕೆ ವಿದ್ಯುತ್ ಖರೀದಿಸಲಾಗುತ್ತಿದೆ. ಈ ಬಗ್ಗೆ ಖುದ್ದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರೇ ಅಕ್ಟೋಬರ್ ನಲ್ಲಿ ಸರ್ಕಾರಕ್ಕೆ 40 ಪುಟಗಳ ಪತ್ರ ಬರೆದಿದ್ದಾರೆಂದು ತಿಳಿಸಿದ್ದಾರೆ.
ಕೇಂದ್ರೀಯ ಉತ್ಪಾದನಾ ಕೇಂದ್ರಗಳಿಂದ ರಾಜ್ಯದ ಎಲ್ಲಾ ಎಸ್ಕಾಂಗಳು 5,514 ಮೆ.ವ್ಯಾಟ್ ವಿದ್ಯುತ್'ನ್ನು ದೀರ್ಘಾವಧಿಗೆ ಪಡೆದುಕೊಂಡಿವೆ. 2019-2020ರ ಅವಧಿಯಲ್ಲಿ ಎಸ್ಕಾಂಗಳಿಂದ ಸಿಜಿಎಸ್'ಗೆ ರೂ.4,288 ಕೋಟಿ ಸ್ಥಿರ ಶುಲ್ಕ ಹಾಗೂ ರೂ.3,.37 ಕೋಟಿ ಪ್ರಸರಣ ಶುಲ್ಕ ಸೇರಿ ರೂ.7,425 ಕೋಟಿ ಪಾವಸಿತಿದೆ. ಇದರಿಂದ ಈಗಾಗಲೇ ರೂ.5 ಸಾವಿರ ಕೋಟಿ ನಷ್ಟ ಉಂಟಾಗಿದ್ದು, 2020-21ನೇ ಸಾಲಿನಲ್ಲಿ ರೂ.15 ಸಾವಿರ ಕೋಟಿ ನಷ್ಟ ಎಂಟಾಗಿದೆ ಎಂದಿದ್ದಾರೆ.