ರಾಜ್ಯ

ಕೋವಿಡ್-19 ನಡುವೆ ದೀಪಾವಳಿ: ಪಟಾಕಿ ದೂರವಿಟ್ಟು ಮಾಲಿನ್ಯ ನಿಯಂತ್ರಿಸಿದ ಬೆಂಗಳೂರಿಗರು!

Srinivasamurthy VN

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕದ ನಡುವೆಯೆ ಬಂದಿದ್ದ ದೀಪಾವಳಿ ಹಬ್ಬ ಸರ್ಕಾರಕ್ಕೆ ದೊಡ್ಡ ತಲೆನೋವಾಗಿತ್ತು. ಪಟಾಕಿ ಸಿಡಿತದಿಂದ ಉಂಟಾಗುವ ವಾಯು ಮಾಲಿನ್ಯ ಸೋಂಕಿತರ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಅಂದಾಜಿಸಿದ್ದರು. ಆದರೆ ಪ್ರಜ್ಞಾವಂತ ಬೆಂಗಳೂರಿಗರು ಪಟಾಕಿಯನ್ನು  ದೂರವಿಡುವ ಮೂಲಕ ಮಾಲಿನ್ಯವನ್ನು ನಿಯಂತ್ರಿಸಿದ್ದಾರೆ.

ಹೌದು.. ದೇಶದ ಇತರೆ ಮಹಾನಗರಗಳಿಗೆ ಹೋಲಿಕೆ ಮಾಡಿದರೆ ದೀಪಾವಳಿ ಹಬ್ಬದ ದಿನಗಳಲ್ಲಿನ ವಾಯುಮಾಲಿನ್ಯದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ತಜ್ಞರು ಅಭಿಪ್ರಾಯಪಟ್ಟಿರುವಂತೆ ದೀಪಾವಳಿ ಹಬ್ಬದ ದಿನಗಳಲ್ಲಿ ದೇಶದ ಇತರೆ 7 ಮಹಾನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿ ಉತ್ತಮ ಗಾಳಿ  ವಾತಾವರಣವಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪರಿಸರ ಗುಪ್ತಚರ ಸಂಸ್ಥೆ ಆ್ಯಂಬಿ, ಬೆಂಗಳೂರಿನಲ್ಲಿ ನವೆಂಬರ್ 9 ರಿಂದ 18ರವರೆಗೂ ಎಕ್ಯೂಐ (ಏರ್ ಕ್ವಾಲಿಟಿ ಇಂಡೆಕ್ಸ್) ವಾಯು ಗುಣಮಟ್ಟ ಸೂಚ್ಯಂಕ 50 ರಿಂದ 70ರೊಳಗೇ ಇದ್ದು, PM2.5 (ಪಾರ್ಟಿಕ್ಯುಲರ್ ಮ್ಯಾಟರ್-ಧೂಳಿನ ಕಣಗಳು) ಪ್ರಮಾಣ  25ರೊಳಗಿದೆ.

ಬೆಂಗಳೂರಿನಲ್ಲಿ ಅತ್ಯಂತ ಕಲುಷಿತ ಪ್ರದೇಶಗಳಲ್ಲಿಯೂ ಎಕ್ಯೂಐ ಪ್ರಮಾಣ 90ರಷ್ಟಿದ್ದು, ನಗರದ ಅತ್ಯಂತ ಕಲುಷಿತ ಪ್ರದೇಶಗಳಲ್ಲಿ ಚಂದ್ರ ಲೇ ಔಟ್, ವಿಜಯನಗರ, ಹಂಪಿನಗರ, ನಾಯಂಡಹಳ್ಳಿ ಸೇರಿವೆ. ಗವಿಪುರಂ, ವಿದ್ಯಾರಣ್ಯಪುರ, ಯಲಹಂಕ ಮುಂತಾದ ಪ್ರದೇಶಗಳಲ್ಲಿ ಪಿಎಂ 2.5 ಲೆವೆಲ್ ಸರಾಸರಿ 35  ಕ್ಕಿಂತ ಹೆಚ್ಚಿದೆ.

ನಗರದಲ್ಲಿ ಅತ್ಯಂತ ಕಡಿಮೆ ಕಲುಷಿತ ಪ್ರದೇಶಗಳ ಪಟ್ಟಿಯಲ್ಲಿ ಬೆಂಗಳೂರು ವಿಮಾನ ನಿಲ್ದಾಣವಿದ್ದು, ಇಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ 50ರಷ್ಟಿತ್ತು. ಮಡಿವಾಳ, ಬೆಳ್ಳಂದೂರು, ಬೊಮ್ಮನಹಳ್ಳಿ, ಮತ್ತು ಎಚ್‌ಎಸ್‌ಆರ್ ಲೇಔಟ್ ಗಳಲ್ಲಿ ಪಿಎಂ 2.5 ಲೆವೆಲ್ ಅತ್ಯಂತ ಕಡಿಮೆ ಅಂದರೆ 16ರಷ್ಟಿತ್ತು. ಕಳೆದ ವರ್ಷಕ್ಕೆ  ಹೋಲಿಕೆ ಮಾಡಿದರೆ ಈ ಬಾರಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಪ್ರಮಾಣದಲ್ಲಿ ಶೇ.40ರಷ್ಟು ಕಡಿತವಾಗಿದೆ ಎಂದು ಆ್ಯಂಬಿ ವರದಿ ನೀಡಿದೆ.

ಬೆಂಗಳೂರು ಹೊರತು ಪಡಿಸಿದರೆ ದೇಶದಲ್ಲಿ ರಾಜಧಾನಿ ದೆಹಲಿ ಅತ್ಯಂತ ಕಲುಷಿತ ನಗರ ಎಂಬ ಕುಖ್ಯಾತಿ ಪಡೆದಿದ್ದು, ಇಲ್ಲಿ ಏರ್ ಕ್ವಾಲಿಟಿ ಇಂಡೆಕ್ಸ್ 250ಕ್ಕಿಂತ ಹೆಚ್ಚಿದೆ. ದೀಪಾವಳಿ ಸಂದರ್ಭದಲ್ಲಿ ಇಲ್ಲಿ ಪಿಎಂ 2.5 ಲೆವೆಲ್ 200ಕ್ಕೂ ಅಧಿಕವಿದ್ದು, ಇದು ಸುರಕ್ಷಿತ ಪ್ರಮಾಣಕ್ಕಿಂತ ದುಪ್ಪಟ್ಟು ಏರಿಕೆಯಾಗಿದೆ. ದೆಹಲಿ  ಬಳಿಕ ಮುಂಬೈ, ಚೆನ್ನೈ, ಹೈದರಾಬಾದ್, ಕೋಲ್ಕತಾ, ಪುಣೆ ಮತ್ತು ಜೈಪುರ ನಗರಗಳೂ ಕಲುಷಿತ ನಗರಗಳ ಪಟ್ಟಿಯಲ್ಲಿವೆ.

ಜೈಪುರ, ದೆಹಲಿ, ಕಾನ್ಪುರ್, ಲಖನೌ ಮತ್ತು ಪಾಟ್ನಾ ನಗರದಲ್ಲಿ ತಾಪಮಾನ ಕುಸಿದಿದ್ದು, ದಟ್ಟ ಮಂಜಿನಿಂದಾಗಿ ಇಲ್ಲಿ ಗೋಚರತೆಯ ಸಮಸ್ಯೆಗಳು ಎದುರಾಗುತ್ತಿವೆ. ಇನ್ನು ಮುಂಬೈನ ವಾಯು ಗುಣಮಟ್ಟ ಸೂಚ್ಯಂಕ ಮಟ್ಟ ಸರಾಸರಿ 150 ಆಗಿದ್ದರೆ, ದೀಪಾವಳಿಯ ನಂತರ ಕೋಲ್ಕತ್ತಾದಲ್ಲಿ ಈ ಪ್ರಮಾಣ 120 ರಿಂದ  170 ಕ್ಕೆ ಏರಿದೆ. ಅಂತೆಯೇ, ದೀಪಾವಳಿಯ ನಂತರ ಪುಣೆಯ ಎಕ್ಯೂಐ ಏರಿದ್ದು, ಇಲ್ಲಿ ಸರಾಸರಿ 100 ಆಗಿತ್ತು. ಹಬ್ಬಕ್ಕೂ ಮೊದಲು, ಚೆನ್ನೈನ ಎಕ್ಯೂಐ ಸರಾಸರಿ 110ರಷ್ಟಿತ್ತು. 
 

SCROLL FOR NEXT