ರಾಜ್ಯ

ಸೆಕ್ರೆಟೇರಿಯಟ್ ನ 542 ಕಿರಿಯ ಸಹಾಯಕರ ಹುದ್ದೆಗಳನ್ನು ರದ್ದುಗೊಳಿಸಲು ಸರ್ಕಾರ ಚಿಂತನೆ!

Manjula VN

ಬೆಂಗಳೂರು: ಬೊಕ್ಕಸಕ್ಕೆ ಭಾರೀ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಕ್ತಿಕೇಂದ್ರದಲ್ಲಿರುವ ಸುಮಾರು 542 ಕಿರಿಯ ಸಹಾಯಕರ ಹುದ್ದೆಗಳನ್ನು ರದ್ದುಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. 

ಸರ್ಕಾರದ ಪ್ರತೀಯೊಂದು ಇಲಾಖೆಯಲ್ಲಿಯೂ 2ರಿಂದ 3 ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದು, ಸರ್ಕಾರಕ್ಕೆ ಪ್ರತೀ ತಿಂಗಳು ಕನಿಷ್ಟವೆಂದರೂ ರೂ.2 ಕೋಟಿ ಹೊರೆಯಾಗುತ್ತಿದೆ. ಹೀಗಾಗಿ ಯಾವ ಇಲಾಖೆಗಳಲ್ಲಿ ಹೆಚ್ಚುವರಿಯಾಗಿ ಅನಗತ್ಯ ಸಿಬ್ಬಂದಿಗಳಿದ್ದಾರೋ ಅವರನ್ನು ಪುನಃ ಮಾತೃಇಲಾಖೆಗೆ ನಿಯೋಜನೆ ಮಾಡುವಂತೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ (ಡಿಪಿಎಆರ್) ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ವರದಿಗಳು ತಿಳಿಸಿವೆ. 

ಪ್ರಸ್ತುತ ವಿಧಾನಸೌಧ, ವಿಕಾಸದೌಧ ಹಾಗೂ ಎಂಎಸ್ ಬಹುಮಹಡಿ ಕಟ್ಟಡಗಳಲ್ಲಿ ಹುದ್ದೆಗಳನ್ನು ಮಂಜೂರು ಮಾಡಲಾಗಿದ್ದು, ಹಾಲಿ 3000-3500 ಜನರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ಹಣಕಾಸು, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಬೃಹತ್ ನೀರಾವರಿ, ಕಂದಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮುಖ್ಯಮಂತ್ರಿಗಳ ಕಾರ್ಯಾಲಯ ಸೇರಿದಂತೆ ಮತ್ತಿತರ ಕಡೆ ಹೆಚ್ಚುವರಿಯಾಗಿ ನಿಯೋಜನೆಗೊಂಡಿದ್ದಾರೆ. ಈ ಹುದ್ದೆಗಳು ಅನಗತ್ಯವಾಗಿದ್ದು, ಜೊತೆಗೆ ಕೆಲವು ಕಡೆ 2-3 ಮಂದಿ ನೌಕರರು ಒಂದೇ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಅನಗತ್ಯ ಸಿಬ್ಬಂದಿಗಳನ್ನು ಮಾತೃ ಇಲಾಖೆಗೆ ನಿಯೋಜನೆ ಮಾಡಬೇಕೆಂದು ಡಿಪಿಎಆರ್ ವರದಿಯಲ್ಲಿ ತಿಳಿಸಿದೆ ಎಂದು ತಿಳಿದುಬಂದಿದೆ. 

ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಒಂದೇ ಹುದ್ದೆಯಲ್ಲಿರುವ ಹೆಚ್ಚುವರಿ ಸಿಬ್ಬಂದಿಯನ್ನು ರದ್ದುಪಡಿಸಿ ಮಾತೃ ಇಲಾಖೆಗೆ ವರ್ಗಾಯಿಸಲು ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. 

ಇದೀಗ ಸಚಿವಾಲಯದಲ್ಲಿರುವ 542 ಕಿರಿಯ ಸಹಾಯಕರ ಹುದ್ದೆಗಳನ್ನು ರದ್ದುಗೊಳಿಸಲು ಸರ್ಕಾರ ಮುಂದಾಗಿದ್ದು, ಉದ್ದೇಶಪೂರ್ವಕವಾಗಿ ಕೆಲವರು ಸರ್ಕಾರದ ಕಡತಗಳನ್ನುೋ ವಿಳಂಬ ಮಾಡುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. 

ಕೆಲ ದಿಂಗಳ ಹಿಂದೆ ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದ ಸಮಿತಿಯು ಆರ್ಥಿಕ ಶಿಸ್ತು ತರುವ ಸದುದ್ದೇಶದಿಂದ ಸಣ್ಣ ಇಲಾಖೆಗಳನ್ನು ವಿಲೀನಗೊಳಿಸುವುದು ಹಾಗೂ ಹೆಚ್ಚುವರಿ ಹುದ್ದೆಗಳನ್ನು ತೆಗೆದು ಹಾಕಬೇಕು. ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿರುವ ಹುದ್ದೆಗಳನ್ನು ರದ್ದುಪಡಿಸಿ ಯಾವ ಇಲಾಖೆಗೆ ಎಷ್ಟು ಸಿಬ್ಬಂದಿಗಳ ಅಗತ್ಯವಿದೆಯೋ ಅಷ್ಟನ್ನು ಮಾತ್ರ ನೇಮಿಸಿಕೊಳ್ಳಬೇಕು. ಅನಗತ್ಯವಾಗಿ ಸಿಬ್ಬಂದಿ ನಿಯೋಜನೆ ಮಾಡಬಾರದು ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. 

ಇ-ಆಡಳಿತದಿಂದಾಗಿ ಇದೀಗ ನಮಗೆ ಹೆಚ್ಚಿನ ಸಿಬ್ಬಂದಿಗಳ ಅಗತ್ಯವಿಲ್ಲ. 542 ಹುದ್ದೆಗಳಲ್ಲಿರುವ ಸಿಬ್ಬಂದಿಗಳಿಗೆ ಯಾವುದೇ ಕೆಲಸಗಳಿಲ್ಲ. ನಾವು ಮತ್ತೆ ಮರುನೇಮಕ ಮಾಡಿಕೊಳ್ಳುವುದಿಲ್ಲ. ಪ್ರಸ್ತುತ ನಿಯೋಜನೆಗೊಂಡಿರುವ ಸಿಬ್ಬಂದಿಗಳನ್ನು ಬೇರೆ ಬೇರೆ ಇಲಾಖೆ, ಕಚೇರಿಗಳಿಗೆ ವರ್ಗಾವಣೆ ಮಾಡುವ ಅಥವಾ ಯಾರಿಗಾದರೂ ಬಡ್ತಿ ಬಾಕಿಗಳು ಇದ್ದರೆ ಬಡ್ತಿ ನೀಡಲಾಗುತ್ತದೆ. ಸಿಬ್ಬಂದಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಕೆಲಸಗಳನ್ನು ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಹುದ್ದೆಗಳನ್ನು ಕಡಿತಗೊಳಿಸುವುದರಿಂದ ರೂ.1.7 ಕೋಟಿ ಉಳಿತಾಯ
ಹೆಚ್ಚುವರಿ ಸಿಬ್ಬಂದಿ ಹುದ್ದೆ ರದ್ದುಗೊಳಿಸುವುದರಿಂದ ಪ್ರತೀ ತಿಂಗಳು ಕನಿಷ್ಟ ರೂ.1.7 ಕೋಟಿವರೆಗೂ ಬೊಕ್ಕಸಕ್ಕೆ ಉಳಿತಾಯವಾಗಲಿದೆ. ಪ್ರತೀ ಸಿಬ್ಬಂದಿ ಕನಿಷ್ಟ ರೂ.25-40 ಸಾವಿರದವರೆಗೂ ವೇತನ ಪಡೆಯುತ್ತಿದ್ದಾರೆ. ಒಂದೇ ಇಲಾಕೆಯಲ್ಲಿ ಇಬ್ಬರಿಂದ ಮೂರು ಸಿಬ್ಬಂದಿ ನಿಯೋಜನೆಗೊಂಡ ಪರಿಣಾಮ ಆರ್ಥಿಕ ಇಲಾಖೆಯು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. 

ಈ ಎಲ್ಲಾ ಸಾಧಕ-ಬಾಧಕಗಳ ಬಗ್ಗೆ ಈಗಾಗಲೇ ಸರ್ಕಾರ ಚರ್ಚೆ ನಡೆಸಿದ್ದು, ಅನಗತ್ಯವಾಗಿ ನಿಯೋಜನೆಗೊಂಡಿರುವ ಸಿಬ್ಬಂದಿಯನ್ನು ಶಕ್ತಿಕೇಂದ್ರಗಳಿಂದ ಖಾಲಿ ಮಾಡುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಈ ಹಿಂದೆ ರಾಜ್ಯ ಸರ್ಕಾರ 12 ಮಂದಿ ಅಧೀನ ಕಾರ್ಯದರ್ಶಿ ಹುದ್ದೆಗಳನ್ನು ರದ್ದುಪಡಿಸಿತ್ತು. 

ಸರ್ಕಾರದ ಈ ನಡೆಗೆ ನೌಕರರ ಸಂಘ ವಿರೋಧ
ವೈಜ್ಞಾನಿಕವಾಗಿ ಅಧ್ಯಯನ ನಡೆಸದೆಯೇ, ಕಡೆ ಪಕ್ಷ ನೌಕರರ ಸಂಘದ ಅಭಿಪ್ರಾಯವನ್ನೂ ಪಡೆಯದೆಯೇ ಸರ್ಕಾರ ಏಕಾಏಕಿ ಕಿರಿಯ ಸಹಾಯಕರ ಹುದ್ದೆಗಳನ್ನು ರದ್ದುಪಡಿಸಲು ಮುಂದಾಗಿರುವುದು ಸರಿಯಲ್ಲ ಎಂದು ಸಚಿವಾಲಯ ಸಿಬ್ಬಂದಿ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿಯವರು ಹೇಳಿದ್ದಾರೆ, 

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಯಾವ ಆಧಾರದ ಮೇಲೆ ಕಿರಿಯ ಸಹಾಯಕರ ಹುದ್ದೆಗಳನ್ನು ರದ್ದು ಮಾಡಲು ಮುಂದಾಗಿದೆಯೋ ಗೊತ್ತಿಲ್ಲ. ವಾಸ್ತವವಾಗಿ ಕಿರಿಯ ಸಹಾಯಕರ ಹುದ್ದೆಗಳೇ ಸಚಿವಾಲಯದ ಆಧಾರಸ್ತಂಭ ಎಂದು ಹೇಳಿದ್ದಾರೆ. 

542 ಕಿರಿಯ ಸಹಾಯಕರ ಹುದ್ದೆಗಳನ್ನು ರದ್ದುಪಡಿಸುವ ಮೂಲಕ ಇ ಆಡಳಿತವನ್ನು ಜಾರಿ ಮಾಡಲು ಸರ್ಕಾರ ಮುಂದಾಗಿದೆ. ಸರ್ಕಾರದ ಈ ಕ್ರಮವನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿದ್ದಾರೆ. 

SCROLL FOR NEXT