ರಾಜ್ಯ

ಕುಂದಾಪುರ: ಸಾರ್ವಜನಿಕರಿಂದ ಲಂಚ ಪಡೆದ ಗ್ರಾಮ ಲೆಕ್ಕಾಧಿಕಾರಿಗೆ 3 ವರ್ಷ ಜೈಲು

Raghavendra Adiga

ಕುಂದಾಪುರ: ಸಾರ್ವಜನಿಕರಿಂದ ಲಂಚ ಪಡೆದದ್ದಕ್ಕಾಗಿ ತೆಕ್ಕಟ್ಟೆ (ಕುಂದಾಪುರ ತಾಲ್ಲೂಕು) ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ ಎಚ್ ಆರ್ ಮೂರು ವರ್ಷಗಳ ಜೈಲುಶಿಕ್ಷೆಗೆ ಗುರಿಯಗಿದ್ದಾರೆ.  ಮಂಜುನಾಥ್ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ನರಹರಿ ಪ್ರಭಾಕರ್ ಮರಾಠೆ ಆದೇಶಿಸಿದ್ದಾರೆ.

ಗ್ರಾಮ ಲೆಕ್ಕಾಧಿಕಾರಿ ಲಂಚಕ್ಕಾಗಿ ಬೇಡಿಕೆ ಇಟ್ಟ ಬಗ್ಗೆ ತೆಕ್ಕಟ್ಟೆಯ ವಿಕ್ರಮ್ ಕಾಮತ್ ಎನ್ನುವವರು ಮಾರ್ಚ್ 15, 2011 ರಂದು ಲೋಕಾಯುಕ್ತರಿಗೆ ದೂರು ನೀಡಿದ್ದರು.

ವಿಕ್ರಮ್ ಅವರ ತಾಯಿ ಮೋಹಿನಿ ಅವರಿಗೆ ತೆಕ್ಕಟ್ಟೆಯಲ್ಲಿ ಹತ್ತು ಸೆಂಟ್ಸ್ ಭೂಮಿ ಇದ್ದು ಆಕೆ ಭೂಪರಿವರ್ತನೆಗೆ ಬಯಸಿ ಗ್ರಾಮ ಲೆಕ್ಕಿಗರನ್ನು ಸಂಪರ್ಕಿಸಿದ್ದಾರೆ. ಆಗ ಮಂಜುನಾಥ್ ಇದಕ್ಕಾಗಿ 15 ಸಾವಿರ ಲಂಚ ಕೇಳಿದ್ದರು. ಅಲ್ಲದೆ ಮುಂಗಡವಾಗಿ ಮೋಹಿನಿಯವರಿಂದ 8,000 ರೂ. ಪಡೆದಿದ್ದರು.  ಆ ನಂತರ ಭೂ ಪರಿವರ್ತನೆ ಪತ್ರ ಸಿದ್ದಪಡಿಸಿ ಅದನ್ನು ಹಸ್ತಾಂತರಿಸಲು 7,000 ರೂ. ನೀಡಬೇಕೆಂದು ಒತ್ತಾಯಿಸಿದ್ದರು. ಈ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಮಂಜುನಾಥ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು.

ಲೋಕಾಯುಕ್ತ ಉಡುಪಿ ಶಾಖೆಯ ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಸಿ ಇ ತಿಮ್ಮಯ್ಯ ಈ ಪ್ರಕರಣದ ತನಿಖೆ ನಡೆಸಿ ಉಡುಪಿಯ ಜಿಲ್ಲಾ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದರು. ನಿನ್ನೆ (ನವೆಂಬರ್ 25) ಈ ಕುರಿತಾದ ತೀರ್ಪು ಪ್ರಕಟಿಸಿ ಅದನ್ನು ಕುಂದಾಪುರದ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. 

ಆರೋಪಿ ಮಂಜುನಾಥ್ ಅವರಿಗೆ ಜೈಲು ಶಿಕ್ಷೆಯ ಹೊರತಾಗಿ 30,000 ರೂ.ಗಳ ದಂಡವನ್ನು ಸಹ ವಿಧಿಸಲಾಗಿದೆ.

ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಲೋಕಾಯುಕ್ತ ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ವಿಜಯ್ಕುಮಾರ್ ಶೆಟ್ಟಿ ಇಂದ್ರಾಳಿ ಅವರು ಈ ಪ್ರಕರಣದ ವಾದ ಮಂಡಿಸಿದ್ದರು.

SCROLL FOR NEXT