ರಾಜ್ಯ

ಚಳಿಗಾಲ: ವೈರಲ್ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆ, ಹೆಚ್ಚಿದ ಆತಂಕ

Manjula VN

ಬೆಂಗಳೂರು: ನಿವಾರ್ ಚಂಡಮಾರುತದ ಪರಿಣಾಮ ರಾಜ್ಯದಲ್ಲಿ ಶೀತ ವಾತಾವರಣ ನಿರ್ಮಾಣವಾಗಿದ್ದು, ಈ ವೇಳೆ ವೈರಲ್ ಸೋಂಕು ಪ್ರಕರಣ ಸಂಖ್ಯೆ ಕೂಡ ಏರಿಕೆಯಾಗುತ್ತಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ. 

ವೈರಲ್ ಸೋಂಕು ಹಾಗೂ ಕೊರೋನಾ ಸೋಂಕಿನ ಲಕ್ಷಣಗಳೆರಡೂ ಒಂದೇ ರೀತಿ ಇರುವುದರಿಂದ ವೈದ್ಯರೂ ಕೂಡ ಆತಂಕಕ್ಕೊಳಗಾಗಿದ್ದಾರೆ. 

ಗಂಟಲು ನೋವು, ಕೆಮ್ಮು ಹಾಗೂ ಶೀತ ಬಾಧೆಗಳು ಕಂಡು ಬರುತ್ತಿದ್ದಂತೆಯೇ ಜನರು ಕೊರೋನಾಗೆ ಹೆದರಿ ಸಣ್ಣಪುಟ್ಟ ಸಮಸ್ಯೆಗಳಿಗೂ ವೈದ್ಯರ ಬಳಿ ತೆರಳುತ್ತಿದ್ದಾರೆ. ಇದರಿಂದ ಕೊರೋನಾ ಹಾಗೂ ಸಾಮಾನ್ಯ ಶೀತದ ನಡುವೆ ವ್ಯತ್ಯಾಸಗಳು ತಿಳಿಯಲು ಸಾಧ್ಯವಾಗದೆ ವೈದ್ಯರು ಆತಂಕಕ್ಕೊಳಗಾಗುತ್ತಿದ್ದಾರೆ. 

ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಶೀತವಾಗುವುದು ಸಾಮಾನ್ಯ. ಪ್ರಮುಖವಾಗಿ ಮಕ್ಕಳು ಅದರಲ್ಲೂ ಅಸ್ತಮಾದಿಂದ ಬಳಲುತ್ತಿರುವ ಮಕ್ಕಳು ಹೆಚ್ಚು ಬಾಧಿತರಾಗುತ್ತಾರೆ. ಕೊರೋನಾ ಬರುವುದಕ್ಕೂ ಮುನ್ನ ಚಳಿಗಾಲದ ಸಂದರ್ಭದಲ್ಲಿ ಏನಾಗುತ್ತಿತ್ತು ಎಂಬುದನ್ನು ಜನರು ಮರೆತಿದ್ದಾರೆ. ಸಣ್ಣಪುಟ್ಟ ಸಮಸ್ಯೆಗಳಾದರೂ ಇದೀಗ ವೈದ್ಯರ ಬಳಿ ಓಡಿ ಬರುತ್ತಿದ್ದಾರೆಂದು ವೈದ್ಯರು ಹೇಳಿದ್ದಾರೆ. 

ಶೀತದಿಂದ ಬಳಲುತ್ತಿರುವ ಜನರಿಗೆ ಆ್ಯಂಟಿ ವೈರಲ್ ಔಷಧಿಗಳನ್ನು ನೀಡಲಾಗುತ್ತದೆ. ಇದೀಗ ಜನರಿಗೆ ನಾವು ಆ್ಯಂಟಿಬಾಡಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವಂತೆ ಸಲಹೆಗಳನ್ನು ನೀಡುತ್ತಿದ್ದೇವೆ. ಸಾಮಾನ್ಯ ಶೀತ ಹಾಗೂ ಕೊರೋನಾ ಸೋಂಕು ನಡುವೆ ವ್ಯತ್ಯಾಸ ಕಂಡು ಹಿಡಿಯುವುದು ಕಷ್ಟಕರವಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸುಧಾರಿಸುವವರೆಗೂ ಜನರು ಸ್ವತಃ ಕ್ವಾರಂಟೈನ್ ನಲ್ಲಿರುವಂತೆ ಸಲಹೆಗಳನ್ನು ನೀಡುತ್ತಿದ್ದೇವೆಂದು ತಿಳಿಸಿದ್ದಾರೆ. 

ಕೊರೋನಾ ಎರಡನೇ ಅಲೆ ಎದುರಿಸಲು ಸರ್ಕಾರ ಸಿದ್ಧವಿದೆ. ಇತ್ತೀಚಿನ ದಿನಗಳಲ್ಲಿ ಕೊರೋನಾ ಲಕ್ಷಣಗಳಿಂದ ವೈದ್ಯರ ಬಳಿ ಬರುತ್ತಿದ್ದಾರೆ. ಅಂತಹವರನ್ನು ಆರ್'ಟಿ-ಪಿಸಿಆರ್ ಪರೀಕ್ಷೆಗೊಳಪಡಿಸಿದಾಗ ವೈದ್ಯಕೀಯ ವರದಿಯಲ್ಲಿ ಸೋಂಕುಗಳಿಲ್ಲ ಎಂದು ಹೇಳಲಾಗುತ್ತಿದೆ. ಮುಂದಿನ ಐದು ದಿನಗಳ ಕಾಲ ಆರೋಗ್ಯದ ಮೇಲೆ ನಿಗಾ ಇರುವಂತೆ ರೋಗಿಗಳಿಗೆ ತಿಳಿಸಲಾಗುತ್ತಿದೆ. ಅಲ್ಲದೆ, ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಇಂತಹ ರೋಗಿಗಳ ಮೇಲೆ ಹೆಚ್ಚಿನ ನಿಗಾ ಇರಿಸುವಂತೆ ಸೂಚಿಸಲಾಗುತ್ತಿದೆ. ವೈರಸ್ ಹೊಸದಾಗಿದ್ದು, ಅದು ಹೇಗೆ ಬದಲಾಗುತ್ತಿದೆ ಎಂಬುದು ತಿಳಿಯದಾಗಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. 

ಪರಿಸ್ಥಿತಿ ಬದಲಾದಂತೆ ನಾವು ಅದನ್ನು ಎದುರಿಸಬೇಕಾಗಿದೆ. ಇಲ್ಲಿಯವರೆಗೂ ಕೊರೋನಾ ಮೂಲ ಲಕ್ಷಣಗಳೇನೆಂಬುದು ನಮಗೆ ತಿಳಿದಿದ್ದು, ಪರೀಕ್ಷೆಗಳ ಮೂಲಕ ಕೊರೋನಾ ಇರುವುದನ್ನು ಕಂಡು ಹಿಡಿಯಲಾಗುತ್ತಿದೆ. ಆದರೆ, ಮುಂದಿನ ಹೊಸ ಸಮಸ್ಯೆಗಳನ್ನು ಕಂಡು ಹಿಡಿಯುವುದು ದೊಡ್ಡ ತಲೆನೋವಾಗಿದೆ. ಕೊರೋನಾದಿಂದ ಗುಣಮುಖರಾದವರಿಗೆ ಆ್ಯಂಟಿಬಾಡಿ ಟೆಸ್ಟ್ ಮಾಡಿಸಿಕೊಳ್ಳುವಂತೆ ಸಲಹೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 

SCROLL FOR NEXT