ರಾಜ್ಯ

ಈ ಬಾರಿ ವಿದ್ಯಾರ್ಥಿಗಳಿಗಿಲ್ಲ ದಸರಾ ರಜೆ: ವಿದ್ಯಾಗಮ, ಆನ್ ಲೈನ್ ಕ್ಲಾಸ್ ಮುಂದುವರಿಕೆ

Shilpa D

ಬೆಂಗಳೂರು:  ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಶಾಲೆಗಳು ತಡವಾಗಿ ಆರಂಭವಾದ ಕಾರಣ ರಾಜ್ಯ ಸರ್ಕಾರ ಮಕ್ಕಳಿಗೆ ನೀಡುತ್ತಿದ್ದ ದಸರಾ ರಜೆಯನ್ನು ರದ್ದು ಪಡಿಸಿದೆ, 

ಅಕ್ಟೋಬರ್ 3 ರಿಂದ ಅಕ್ಟೋಬರ್ 26 ರವರೆಗೆ ಪ್ರತಿ ವರ್ಷ ಮಕ್ಕಳಿಗೆ ದಸರಾ ರಜೆ ನೀಡಲಾಗುತ್ತಿತ್ತು. ಆದರೆ ಈ ವರ್ಷ ದಸರಾ ರಜೆ ರದ್ದು ಪಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.

ಪ್ರಸಕ್ತ ಶೈಕ್ಷಣಿಕ ಸಾಲಿನ ಶಾಲೆಗಳನ್ನು ಪ್ರಾರಂಭ ಕುರಿತು ಪ್ರಾಥಮಿಕ ಶಾಲೆ, ಪ್ರೌಢಶಾಲೆ ಶಿಕ್ಷಕರ ಸಂಘಟನೆಗಳ ಹಾಗೂ ಪದವಿ ಪೂರ್ವ ಉಪನ್ಯಾಸಕರ ಸಂಘಗಳ ಜಿಲ್ಲಾ ಪ್ರತಿನಿಧಿಗಳೊಂದಿಗೆ ಗುರುವಾರ ವೆಬಿನಾರ್ ಸಂವಾದ ನಡೆಸಿ ಮಾತನಾಡಿದ ಅವರು, ಸರ್ಕಾರಕ್ಕೆ ಈ ನಾಡಿನ ಮಕ್ಕಳ ಹಿತವೇ ಪ್ರಮುಖವಾಗಿದ್ದು, ಮಕ್ಕಳ ಆರೋಗ್ಯಕ್ಕೆ ತೊಂದರೆಯಾಗುವ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲಾಗುವುದಿಲ್ಲ ಎಂದರು.

ವಿದ್ಯಾಗಮ, ಯೂ-ಟ್ಯೂಬ್, ಆನ್ ಲೈನ್, ಚಂದನ ಚಾನಲ್ ನ ಸೇತುಬಂಧ ತರಗತಿಗಳು ನಮ್ಮ ಮಕ್ಕಳ ಕಲಿಕೆಯ ನಿರಂತರತೆಗೆ ಮಾತ್ರ ಉಪಯೋಗವಾಗುತ್ತಿವೆ. ಆವು ಪೂರ್ಣ ಪರ್ಯಾಯವೂ ಅಲ್ಲ, ಪೂರಕವೂ ಅಲ್ಲ ಎಂಬುದು ನಮಗೆ ಮನವರಿಕೆಯಾಗಿದೆ. ಶಾಲಾ ತರಗತಿ ಕಲಿಕೆಯಷ್ಟು ಯಾವುದೇ ಕಲಿಕಾ ವಿಧಾನ ಪರಿಣಾಮಕಾರಿಯಲ್ಲ. ಆದರೂ
ಶಾಲಾರಂಭದ ಆಲೋಚನೆ‌ ಸದ್ಯಕ್ಕೆ ನಮ್ಮ ಮುಂದಿಲ್ಲ ಎಂದು ಹೇಳಿದ್ದಾರೆ.

‘ನಾನು ಶಿಕ್ಷಣ ಸಚಿವ ಎಂಬುದಕ್ಕಿಂತ ರಾಜ್ಯದ ಎಲ್ಲ ಶಾಲಾ ಮಕ್ಕಳ ಪೋಷಕನೂ ಆಗಿದ್ದೇನೆ ಎಂಬ ಅಂಶವೇ ಪ್ರಮುಖವಾಗಿದ್ದು, ಎಲ್ಲ ಪೋಷಕರಂತೆ ನನಗೂ ಆತಂಕ ಇಲ್ಲದೇ ಇಲ್ಲ, ನನಗೂ ಮಕ್ಕಳ ಹಿತವೇ ಮುಖ್ಯವಾಗಿದೆ’ ಎಂದು ಹೇಳಿದ ಸಚಿವರು, ಈ ನಿಟ್ಟಿನಲ್ಲಿ ಸಾರ್ವಜನಿಕ ಅಭಿಪ್ರಾಯ ಆಲಿಸುವ ಸರಣಿ ಆರಂಭಿಸಿದ್ದು, ಇಂದು ಶಿಕ್ಷಕ-ಉಪನ್ಯಾಸಕರ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದೇನೆ. ಅತಿ ಶೀಘ್ರದಲ್ಲಿ ಶಿಕ್ಷಣ ತಜ್ಞರು, ಪೋಷಕ ಸಘಟನೆಗಳು, ಶಿಕ್ಷಣ ಪ್ರೇಮಿಗಳು, ಖಾಸಗಿ ಶಾಲಾ ಸಂಸ್ಥೆಗಳು, ಜನಪ್ರತಿನಿಧಿಗಳೂ ಸೇರಿದಂತೆ ಶಾಸಕರು, ಸಂಸದರು ಸೇರಿದಂತೆ ಶಿಕ್ಷಣ ಕ್ಷೇತ್ರದ ಎಲ್ಲ ಪಾಲುದಾರರೊಂದಿಗೆ ಚರ್ಚಿಸಿ ಎಲ್ಲರ ಅಭಿಪ್ರಾಯ ಪಡೆಯಲಾಗುವುದು. ಆ ಮೂಲಕ ಮಕ್ಕಳ ಹಿತಕ್ಕೆ ಪೂರಕವಾಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಇದು ಅಭಿಪ್ರಾಯ ಸಂಗ್ರಹ ಮಾತ್ರವೇ ಆಗಿದೆ ಎಂದರು.

‘ಕಾಲೇಜುಗಳ ಆರಂಭಕ್ಕೆ ಸಂಬಂಧಿಸಿ ಯುಜಿಸಿ ಈಗಾಗಲೇ ಮಾರ್ಗಸೂಚಿ ನೀಡಿದೆ. ಅದರಂತೆ, ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.‌ ಸುರೇಶ್‌ಕುಮಾರ್‌ ಜತೆಗೂ ಚರ್ಚಿಸಿದ ನಂತರ ಸ್ಪಷ್ಟ ಮಾಹಿತಿ ನೀಡಲಾಗುವುದು’ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಯಾವುದೇ ಸಮಸ್ಯೆ ಆಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಶೈಕ್ಷಣಿಕ ಚಟುವಟಿಕೆ ಆರಂಭಿಸಲಾಗಿದೆ. ಅದರ ಮುಂದುವರೆದ ಭಾಗವಾಗಿ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಎಂದಿನಿಂದ ಹಾಜರಾಗಬೇಕು ಎಂಬ ಬಗ್ಗೆ ಸಂಬಂಧಿಸಿದವರ ಜೊತೆ ಚರ್ಚಿಸಲಾಗುವುದು’ ಎಂದರು.

SCROLL FOR NEXT