ಬೆಂಗಳೂರು: ಕೊರೋನಾ ನಿಯಂತ್ರಣ ಸಂಬಂಧ ಜಾರಿಗೊಳಿಸಿದ ನಿರ್ಬಂಧಗಳನ್ನು ಮತ್ತಷ್ಟು ಸಡಿಲಗೊಳಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಅನ್'ಲಾಕ್ 5.0 ಮಾರ್ಗಸೂಚಿಗಳನ್ನು ಜಾರಿಗೊಳಿಸಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದ್ದು, ಈ ತಿಂಗಳ 15ರ ಬಳಿಕ ಶಾಲೆಗಳು, ಕಾಲೇಜುಗಳನ್ನು ಹೊರತಪಡಿಸಿ ಉಳಿದೆಲ್ಲಾ ಕ್ಷೇತ್ರಗಳ ಕಾರ್ಯಗಳು ಪುನರಾರಂಭಗೊಳ್ಳಲಿವೆ.
ಅಕ್ಟೋಬರ್ 15ರ ಬಳಿಕ ಶಾಲೆಗಳ ಪುನರಾರಂಭ ಸಂಬಂಧ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯು ಹಂತಹಂತವಾಗಿ ತೀರ್ಮಾನ ಕೈಗೊಳ್ಳಬಹುದು ಎಂದು ಸರ್ಕಾರ ಸೂಚಿಸಿದೆ.
ಕ್ರೀಡಾಪಟುಗಳ ತರಬೇತಿಗಾಗಿ ಬಳಲುತ್ತಿರುವ ಈಜುಕೊಳಗಳನ್ನು ಕೂಡ ಅ.15ರ ನಂತರ ಜಾರಿಗೆ ಬರುವಂತೆ ತೆರೆಯಲು ಅನುಮತಿ ನೀಡಲಾಗಿದೆ. ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿದ ಪ್ರದೇಶದಲ್ಲಿ ಮಾತ್ರವೇ ಸಿನಿಮಾ, ರಂಗಮಂದಿರ, ಮಲ್ಟಿಪ್ಲೆಕ್ಸ್'ಗಳನ್ನು ಶೇ.50ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಿ ತೆರೆಯಲು ಅನುಮತಿ ನೀಡಲಾಗಿದೆ. ಅಲ್ಲದೇ, ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿದ ಪ್ರದೇಶದಲ್ಲಿ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗಿದೆ.
ಗರಿಷ್ಠ 100 ಜನರಿಗೆ ಮಾತ್ರ ಅವಕಾಶ ನೀಡಿ, ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳು ಮತ್ತು ಇತರೆ ಸಮಾರಂಭಗಳಿಗೆ ಈಗಾಗಲೇ ಅನುಮತಿ ನೀಡಲಾಗಿದೆ. ಒಳಾಂಗಣ ಸ್ಥಳದಲ್ಲಿ 200 ಜನರ ಪರಿಮಿತಿಗೆ ಒಳಪಟ್ಟು ಸಭಾಭವನದ ಒಟ್ಟು ಸಾಮರ್ಥ್ಯದ ಗರಿಷ್ಠ ಶೇ.50ರಷ್ಟಕ್ಕೆ ಅನುಮತಿ ನೀಡಲಾಗಿದೆ.