ರಾಜ್ಯ

ಸಕಲೇಶಪುರ-ಸುಬ್ರಮಣ್ಯ ರಸ್ತೆಯ ಘಾಟ್ ಸೆಕ್ಷನ್ ನಲ್ಲಿ ಸಿಗ್ನಲಿಂಗ್ ಯೋಜನೆ ಮೇಲ್ದರ್ಜೆಗೆ

Nagaraja AB

ಮಂಗಳೂರು: ರೈಲ್ವೆ ಸುರಕ್ಷತಾ ಆಯುಕ್ತರು ವಿಧಿಸಿರುವ ನಿರ್ಬಂಧದಂತೆ ಸಕಲೇಶಪುರ ಮತ್ತು ಸುಬ್ರಮಣ್ಯ ರಸ್ತೆ ನಡುವಿನ 55 ಕಿ.ಮೀ ಘಾಟ್ ಸೆಕ್ಷನ್ ನಲ್ಲಿ ಹೆಚ್ಚುವರಿ ಪ್ರಯಾಣಿಕರ ಸೇವೆ ಮತ್ತು ಸರಕು ರೈಲುಗಳ ಸಂಚಾರ ಕಷ್ಟಕರವಾಗಿತ್ತು.

ರೈಲು ಕಾರ್ಯಾಚರಣೆಗೆ ಅಡ್ಡಿಯಾಗಿದ್ದ ಮೂಲಸೌಕರ್ಯ ಕೊರತೆಯನ್ನು ನಿವಾರಿಸುವ ನಿಟ್ಟಿನಲ್ಲಿ  ನೈರುತ್ಯ ರೈಲ್ವೆ  ಮೈಸೂರು ವಿಭಾಗ ಈ ವರ್ಷದ ಜೂನ್ ನಿಂದ  ಕಡಗರಾವಳ್ಳಿ ಮತ್ತು ಯೆಡಕುಮಾರಿ ನಿಲ್ದಾಣಗಳಲ್ಲಿ ಸಿಗ್ನಲಿಂಗ್ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಮಲ್ಟಿ-ಸೆಕ್ಷನ್ ಡಿಜಿಟಲ್ ಆಕ್ಸಲ್ ಕೌಂಟರ್ (ಎಂಎಸ್‌ಡಿಎಸಿ) ಎನ್ನುವುದು ಅತ್ಯಾಧುನಿಕ ತಂತ್ರಜ್ಞಾನವಾಗಿದ್ದು, ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ರೈಲು ಪತ್ತೆಗಾಗಿ ವಿನ್ಯಾಸಗೊಳಿಸಲಾಗಿದೆ.

ಹಾಸನ್- ಮಂಗಳೂರು ರೈಲ್ವೆ ಅಭಿವೃದ್ಧಿ ಕಂಪನಿ ಲಿಮಿಟೆಡ್ ದಿಂದ ರೂ .4.4 ಕೋಟಿ ವೆಚ್ಚ ಭರಿಸಿದ್ದು, ಸಕಲೇಶಪುರ-ಸುಬ್ರಮಣ್ಯದಲ್ಲಿ ಯೆಡಕುಮಾರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ನಡುವೆ ಬಹು-ವಿಭಾಗದ ಡಿಜಿಟಲ್ ಆಕ್ಸಲ್ ಕೌಂಟರ್ (ಎಂಎಸ್‌ಡಿಎಸಿ) ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದು ರೈಲ್ವೆಯ ಪ್ರಕಟಣೆ ತಿಳಿಸಿದೆ. 

ಇದರಿಂದಾಗಿ  ಸುಮಾರು ಶೇ. 35 ರಷ್ಟು ಸಾಮರ್ಥ್ಯ ಹೆಚ್ಚಿದಂತಾಗಿದ್ದು, ಹೆಚ್ಚುವರಿ ಪ್ರಯಾಣಿಕ ಸೇವೆ ಆರಂಭಿಸಲು ನೆರವಾಗಲಿದೆ ಮತ್ತು ಸರಕು ಸೇವಾ ರೈಲುಗಳು ಹೆಚ್ಚಿನ ದಕ್ಷತೆಯಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದಾಗಿದೆ.ಈ ತಂತ್ರಜ್ಞಾನವನ್ನು ಅಳವಡಿಸುವಲ್ಲಿ ನೈರುತ್ಯ ರೈಲ್ವೆ ಮೈಸೂರು ವಿಭಾಗದ ಸಿಗ್ನಿಲ್ ಮತ್ತು ಟೆಲಿ ಕಮ್ಯೂನಿಕೇಷನ್ ವಿಭಾಗದ ಎಂಜಿನಿಯರ್ ಡಾ. ಶ್ರೀನಿವಾಸಲು ಮುಂಚೂಣಿಯ ಪಾತ್ರ ವಹಿಸಿದ್ದಾರೆ.

ನೂತನ ಸುರಕ್ಷತಾ ಕ್ರಮದಿಂದ ಘಾಟ್ ಸೆಕ್ಷನ್ ನಲ್ಲಿ ಸುರಕ್ಷತೆ ಹೆಚ್ಚಿದಂತಾಗಿದ್ದು, ಹೆಚ್ಚಿನ ರೈಲುಗಳು ಸಂಚರಿಸುವ ವಿಶ್ವಾಸವಿರುವುದಾಗಿ ನೈರುತ್ಯ ರೈಲ್ವೆ ಮೈಸೂರು ವಿಭಾಗದ ಡಿಆರ್ ಎಂ ಅಪರ್ಣಾ ಗಾರ್ಗ್ ತಿಳಿಸಿದ್ದಾರೆ.

SCROLL FOR NEXT