ರಾಜ್ಯ

ಬೆಳಕಿನ ಆಶಾಕಿರಣ: ಕರ್ನಾಟಕದ 2 ಜಿಲ್ಲೆಗಳಲ್ಲಿ ಕೋವಿಡ್-19 ಸಕ್ರಿಯ ಕೇಸುಗಳ ಇಳಿಕೆ

Sumana Upadhyaya

ಪ್ರಕರಣ 1 ಬೀದರ್: ಕಳೆದ ಮಾರ್ಚ್ ತಿಂಗಳಲ್ಲಿ ರಾಜ್ಯಕ್ಕೆ ಕೋವಿಡ್-19 ಕಾಲಿಟ್ಟಾಗ ಬೀದರ್ ಜಿಲ್ಲೆಯಲ್ಲಿ ಅಧಿಕ ಕೊರೋನಾ ಪ್ರಕರಣಗಳಿದ್ದವು.

6 ತಿಂಗಳು ಕಳೆದ ನಂತರ ನಿನ್ನೆ ಜಿಲ್ಲೆಯಲ್ಲಿನ ಕೊರೋನಾ ಪ್ರಕರಣಗಳನ್ನು ನೋಡಿದರೆ ರಾಜ್ಯದಲ್ಲಿಯೇ ಅತಿ ಕಡಿಮೆ ಸಕ್ರಿಯ ಕೊರೋನಾ ಪ್ರಕರಣಗಳಿರುವುದು ಬೀದರ್ ಜಿಲ್ಲೆಯಲ್ಲಿ. ಅಧಿಕೃತ ಮಾಹಿತಿ ಪ್ರಕಾರ, ನಿನ್ನೆ ಜಿಲ್ಲೆಯಲ್ಲಿ 57 ಮಂದಿಗೆ ಸೋಂಕು ಪತ್ತೆಯಾಗಿದ್ದು, 35 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಕೇಸುಗಳು ನಿನ್ನೆ 411 ಆಗಿವೆ.

ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ನಿಂದ ಹಿಂತಿರುಗಿದ ಮಂದಿಯಲ್ಲಿ ಕೊರೋನಾ ಕಾಣಿಸಿಕೊಂಡು ಮಾರ್ಚ್ 23ರಂದು ಮೊದಲ ಕೊರೋನಾ ಕೇಸು ವರದಿಯಾಗಿತ್ತು. ಮೊದಲ ಸಾವು ಮೇ 2ರಂದು ಸಂಭವಿಸಿತ್ತು.

ನಂತರ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ಆಗಮನದಿಂದ ಕೊರೋನಾ ಪ್ರಕರಣ ಹೆಚ್ಚಾಗತೊಡಗಿತು. ಆಗಸ್ಟ್ ಕೊನೆಯವರೆಗೂ ಜಾಸ್ತಿಯಾಗಿತ್ತು. ಜಿಲ್ಲೆಯಲ್ಲಿ ಸದ್ಯ 6 ಸಾವಿರದ 556 ಒಟ್ಟು ಕೊರೋನಾ ಕೇಸುಗಳಿದ್ದು ಒಟ್ಟು 6 ಸಾವಿರದ 005 ಮಂದಿ ಗುಣಮುಖರಾಗಿದ್ದಾರೆ. ಗುಣಮುಖ ಹೊಂದಿರುವವರ ಸಂಖ್ಯೆ ಶೇಕಡಾ 91.60ಯಷ್ಟಿದೆ ಎಂದು ಬೀದರ್ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ ಕೃಷ್ಣರೆಡ್ಡಿ ತಿಳಿಸಿದ್ದಾರೆ.

ಸಕ್ರಿಯ ಕೇಸುಗಳು ಇಳಿಕೆ, ವಿಭಾಗವನ್ನು ಮುಚ್ಚಿದ ಹುಬ್ಬಳ್ಳಿಯ ಕಿಮ್ಸ್: ನಗರದ ಕಿಮ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಾಲ್ಕನೇ ಮಹಡಿ ಕಳೆದೊಂದು ವಾರದಿಂದ ಮುಚ್ಚಿದೆ. ಕೋವಿಡ್ ಸಕ್ರಿಯ ಕೇಸುಗಳು ಇಳಿಕೆಯಾಗಿರುವುದೇ ಇದಕ್ಕೆ ಕಾರಣವಾಗಿದೆ.
ಇದುವರೆಗೆ ಜಿಲ್ಲೆಯಲ್ಲಿ 18 ಸಾವಿರ ಸಕ್ರಿಯ ಕೇಸುಗಳಿದ್ದು ಕಳೆದ 10 ದಿನಗಳಿಂದೀಚೆಗೆ ಪ್ರತಿದಿನ ಕೊರೋನಾ ಕೇಸುಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿದಿನ ಕೊರೋನಾ ಸೋಂಕಿತರ ಸಂಖ್ಯೆ 150ಕ್ಕಿಂತ ಕಡಿಮೆಯಾಗುತ್ತಿದೆ.

ಕಿಮ್ಸ್ ಆಸ್ಪತ್ರೆಯಲ್ಲಿ 450 ಸಾಮಾನ್ಯ ಬೆಡ್ ಗಳು ಮತ್ತು 120 ಐಸಿಯು ಬೆಡ್ ಗಳನ್ನು ಕೊರೋನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಾಗಿದೆ. ಹಿಂದಿನ ತಿಂಗಳುಗಳಲ್ಲಿ ಎಲ್ಲಾ ಬೆಡ್ ಗಳು ಭರ್ತಿಯಾಗುತ್ತಿದ್ದವು. ಕಳೆದ ಕೆಲ ದಿನಗಳಿಂದೀಚೆಗೆ ಕೊರೋನಾ ಪೀಡಿತರು ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದೆ.ಪ್ರಸ್ತುತ ಆಸ್ಪತ್ರೆಯಲ್ಲಿ ಸುಮಾರು 320 ರೋಗಿಗಳಿದ್ದು 93 ಮಂದಿ ಐಸಿಯುನಲ್ಲಿದ್ದಾರೆ. ದಾಖಲಾಗುವವರ ಸಂಖ್ಯೆ ಶೇಕಡಾ 20ರಷ್ಟು ಕಡಿಮೆಯಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ ರಾಮಲಿಂಗಪ್ಪ ಅಂತರತಾನಿ ಹೇಳಿದರು.

SCROLL FOR NEXT