ಬೆಂಗಳೂರು: ಕೊರೋನಾ ಸೋಂಕು ವ್ಯಾಪಕಗೊಳ್ಳುತ್ತಿದ್ದು, ಸಾರ್ವಜನಿಕರು ಮಾಸ್ಕ್ ಧರಿಸಿ ಜವಾಬ್ದಾರಿಯುತವಾಗಿ ವರ್ತಿಸಬೇಕೆಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಮನವಿ ಮಾಡಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಂಡದ ಮೊತ್ತದ ಕುರಿತ ನಿರ್ಧಾರ ಸರ್ಕಾರಕ್ಕೆ ಸಂಬಂಧಿಸಿದ್ದು, ಸರ್ಕಾರದ ಆದೇಶವನ್ನು ಪೊಲೀಸರು ಪಾಲನೆ ಮಾಡುತ್ತಾರೆ. ಮಾಸ್ಕ್ ಧರಿಸದ ಜನರಿಗೆ ದಂಡ ವಿಧಿಸಲು ಪೊಲೀಸರಿಗೆ ಈವರೆಗೂ 110 ಯಂತ್ರಗಳನ್ನು ವಿತರಿಸಲಾಗಿದೆ ಎಂದು ಹೇಳಿದ್ದಾರೆ.
ಸಾಂಕ್ರಾಮಿಕ ರೋಗ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಎಷ್ಟು ಮುಖ್ಯ ಎಂಬುದರ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಅಭಿಯಾನ ಕಾರ್ಯಕ್ರಮಗಳನ್ನು ಶುಕ್ರವಾರದಿಂದ ಆರಂಭಿಸುತ್ತೇವೆ. ಈ ಅಭಿಯಾನದಲ್ಲಿ ಇಡೀ ಪೊಲೀಸ್ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ಉಚಿತವಾಗಿ ಮಾಸ್ಕ್ ಗಳನ್ನೂ ವಿತರಿಸುತ್ತೇವೆಂದು ತಿಳಿಸಿದ್ದಾರೆ.
ಇದೇ ವೇಳೆ ದಂಡ ವಿಧಿಸುವ ಮಾರ್ಷಲ್ ಗಳೊಂದಿಗೆ ಸಾರ್ವಜನಿಕರು ಜಗಳಕ್ಕಿಳಿಯುತ್ತಿರುವ ಘಟನೆಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮಾಸ್ಕ್ ಧರಿಸುವುದರಿಂದ ನಾವು ಸುರಕ್ಷಿತರಾಗಿರುತ್ತೇವೆ. ದಂಡದಿಂದ ದೂರ ಉಳಿಯಲು ಜನರು ಮಾಸ್ಕ್ ಧರಿಸಬೇಕು. ದಂಡದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುವವರಿಗೆ ಮಾಸ್ಕ್ ಧರಿಸುವುದು ಬಿಟ್ಟರೆ ಬೇರೆ ದಾರಿಯಿಲ್ಲ. ಮೂಗು, ಬಾಯಿ ಮುಚ್ಚಿಕೊಳ್ಳಲು ಮಾಸ್ಕ್ ವೊಂದನ್ನೇ ಧರಿಸಬೇಕೆಂದಿಲ್ಲ, ಕರವಸ್ತ್ರ, ಮನೆಯಲ್ಲಿ ಲಭ್ಯವಿರುವ ಬಟ್ಟೆಗಳನ್ನೂ ಕೂಡ ಧರಿಸಬಹುದು ಎಂದು ತಿಳಿಸಿದ್ದಾರೆ.
ನಗರ ಕೇಂದ್ರ ವಿಭಾಗದಲ್ಲಿದಲ್ಲಿ ನಿನ್ನೆ ಮಾಸ್ಕ್ ಧರಿಸದ 220 ಕೇಸ್, ಸಾಮಾಜಿಕ ಅಂತರ ಕಾಯ್ದುಕೊಳ್ಳದ 85 ಪ್ರಕರಣಗಳು ದಾಖಲಾಗಿವೆ. ಇನ್ನು ಆಗ್ನೇಯ ವಿಭಾಗದ ಪೊಲೀಸರು ಮಾಸ್ಕ್ ಧರಿಸದ 76, ಸಾಮಾಜಿಕ ಅಂತರ ಕಾಯ್ದುಕೊಳ್ಳದ 12 ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದು, ಒಟ್ಟಾರೆ 88,000 ದಂಡವನ್ನು ವಸೂಲಿ ಮಾಡಿದ್ದಾರೆ.