ರಾಜ್ಯ

2 ವರ್ಷದಿಂದ ಬಿಲ್ ಕಟ್ಟಿಲ್ಲ: ಬಿಡಿಎ ಆಲೂರ್ ಹೌಸಿಂಗ್ ಪ್ರಾಜೆಕ್ಟ್ ಎಸ್ ಟಿಪಿ ಘಟಕಕ್ಕೆ ವಿದ್ಯುತ್ ಸಂಪರ್ಕ ಕಡಿತ

Sumana Upadhyaya

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಬಿಡಿಎಯ ಆಲೂರು ಹೌಸಿಂಗ್ ಪ್ರಾಜೆಕ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಒಳಚರಂಡಿ ನೀರಿನ ಸಂಸ್ಕರಣಾ ಘಟಕದಿಂದ ಬಾಕಿ ಉಳಿಸಿಕೊಂಡಿದ್ದ 4.1 ಲಕ್ಷ ರೂಪಾಯಿಗಳ ವಿದ್ಯುತ್ ಬಿಲ್ ಪಾವತಿಯಿಂದಾಗಿ ಈ ವಾರದ ಆರಂಭದಲ್ಲಿ ಘಟಕಕ್ಕೆ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತ ಮಾಡುವ ಪರಿಸ್ಥಿತಿ ಬಂದಿದೆ.

ಇದಾದ ಬಳಿಕ ಇಲ್ಲಿನ ನಿವಾಸಿಗಳು ಬಡಿಎ ಕಚೇರಿ ಬಳಿ ಬಂದು ತಮಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಪ್ರತಿಭಟನೆ ನಡೆಸಿದ್ದಾರೆ.
ಆಲೂರ್ ಹೌಸಿಂಗ್ ಕಾಂಪ್ಲೆಕ್ಸ್ ನಲ್ಲಿ 1504 ಫ್ಲಾಟ್ ಗಳಲ್ಲಿ ಸುಮಾರು 1400 ಫ್ಲಾಟ್ ಗಳನ್ನು ಎರಡು ವರ್ಷಗಳ ಹಿಂದೆ ಸಬ್ಸಿಡಿ ದರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲಾಗಿತ್ತು. ಸುಮಾರು 500 ಕುಟುಂಬಗಳು ಇಲ್ಲಿ ಸದ್ಯಕ್ಕೆ ನೆಲೆಸಿವೆ. ಫ್ಲಾಟ್ ಕಾಂಪ್ಲೆಕ್ಸ್ ಆವರಣದಲ್ಲಿ ಒಳಚರಂಡಿ ಸಂಸ್ಕರಣಾ ಘಟಕ(ಎಸ್ ಟಿಪಿ) ಸ್ಥಾಪಿಸಲಾಗಿತ್ತು. ಸಂಸ್ಕರಣೆ ಮಾಡಿದ ನೀರನ್ನು ಉದ್ಯಾನವನದ ಗಿಡಗಳಿಗೆ ಮತ್ತು ಇತರ ಸ್ವಚ್ಛತೆ ಉದ್ದೇಶಗಳಿಗೆ ಬಳಸಲಾಗುತ್ತಿತ್ತು.

ನೆಲಮಂಗಲ ವಿಭಾಗದ ಬೆಸ್ಕಾಂ ಕಾರ್ಯಕಾರಿ ಎಂಜಿನಿಯರ್ ಕೆ ಟಿ ಗಂಗರಾಜು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿ, ಎಸ್ ಟಿಪಿ ಘಟಕಕ್ಕೆ ತಿಂಗಳಿಗೆ 16 ಸಾವಿರ ರೂಪಾಯಿಗಳಷ್ಟು ವಿದ್ಯುತ್ ಬಿಲ್ ಬರುತ್ತಿತ್ತು. ಕಳೆದ ಎರಡು ವರ್ಷಗಳಿಂದ ವಿದ್ಯುತ್ ಬಿಲ್ ಕಟ್ಟಿರಲಿಲ್ಲ. ಅದರ ಮೊತ್ತ ಸುಮಾರು 4.1 ಲಕ್ಷ ರೂಪಾಯಿಗಳಾಗುತ್ತವೆ. ಅದಕ್ಕೆ ಹೊರತಾಗಿ ಖಾಲಿ ಮಾಡಿರುವ ಮನೆಗಳ ಪಾವತಿಸದಿರುವ ವಿದ್ಯುತ್ ಬಿಲ್ ಸುಮಾರು 3ಲಕ್ಷ ರೂಪಾಯಿಗಳಾಗುತ್ತವೆ.

ವಿದ್ಯುತ್ ಬಿಲ್ ಪಾವತಿಸಿ ಎಂದು ಪದೇ ಪದೇ ಹೇಳಿದರೂ ಕೂಡ ಪಾವತಿಸಲಿಲ್ಲ, ಹೀಗಾಗಿ ಅಕ್ಟೋಬರ್ 5ರಂದು ಸಂಪರ್ಕ ಕಡಿತ ಮಾಡಿದೆವು. ಇದೇ ಮೊದಲ ಬಾರಿಗೆ ಬೆಸ್ಕಾಂ ಈ ಪ್ರದೇಶದಲ್ಲಿ ಈ ನಿರ್ಧಾರ ಕೈಗೊಂಡಿದೆ ಎಂದು ಗಂಗರಾಜು ಹೇಳುತ್ತಾರೆ. ಇನ್ನು ಕೆಲ ಮನೆಗಳಲ್ಲಿರುವವರು ಸಹ ಆಗಾಗ ವಿದ್ಯುತ್ ಬಿಲ್ ಸರಿಯಾಗಿ ಪಾವತಿ ಮಾಡುತ್ತಿಲ್ಲ. ವೈಯಕ್ತಿಕವಾಗಿ ವಿದ್ಯುತ್ ಬಿಲ್ ಇಷ್ಟು ದಿನಗಳೊಳಗೆ ಪಾವತಿಸುತ್ತೇವೆ ಎಂದು ಹೇಳಿದವರಿಗೆ ಕಡಿತ ಮಾಡಿಲ್ಲ ಎನ್ನುತ್ತಾರೆ.

ಬಿಡಿಎ ಅಧಿಕಾರಿಯೊಬ್ಬರು, ಎಸ್ ಟಿಪಿ ಬಿಲ್ ಪಾವತಿಸುವುದು ಹೌಸಿಂಗ್ ಸೊಸೈಟಿಯ ಜವಾಬ್ದಾರಿಯಾಗಿದೆ. ಆದರೂ ಅಲ್ಲಿ ವಾಸಿಸುತ್ತಿರುವವರೆಲ್ಲರೂ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿರುವುದರಿಂದ ಮತ್ತು ಹಲವು ಮನೆಗಳು ಇನ್ನೂ ಖಾಲಿಯಿರುವುದರಿಂದ ಪ್ರತಿ ಮನೆಗಳಿಂದ ಪ್ರತಿ ತಿಂಗಳು ಸುಮಾರು 250 ರೂಪಾಯಿ ವಿದ್ಯುತ್ ಬಿಲ್ ಸಂಗ್ರಹಿಸಿ ಬೆಸ್ಕಾಂಗೆ ಕಟ್ಟುತ್ತೇವೆ. ಇನ್ನೂ ಹೆಚ್ಚು ಮನೆಗಳಿಗೆ ಜನರು ಬಂದು ನೆಲೆಸಿದಾಗ ಈ ಮೊತ್ತ ಇನ್ನೂ ಕಡಿಮೆಯಾಗುತ್ತದೆ. ಬಿಲ್ ಪಾವತಿಸಿದರೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆ ಎಂದರು.

SCROLL FOR NEXT