ರಾಜ್ಯ

ಸಂಗೀತ ನಿರ್ದೇಶಕ ರಾಜನ್ ನಿಧನಕ್ಕೆ ಸಿಎಂ ಯಡಿಯೂರಪ್ಪ ಸೇರಿ ಗಣ್ಯರ ಸಂತಾಪ

Lingaraj Badiger

ಬೆಂಗಳೂರು: ಸಂಗೀತ ನಿರ್ದೇಶಕ ರಾಜನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಯಡಿಯೂರಪ್ಪ, ಹೆಸರಾಂತ ಹಿರಿಯ ಸಂಗೀತ ನಿರ್ದೇಶಕ ರಾಜನ್ ಅವರು ನಿಧನರಾದ ಸುದ್ದಿ ತೀವ್ರ ಶೋಕವನ್ನುಂಟು ಮಾಡಿದೆ. ತಮ್ಮ ಸಹೋದರ ನಾಗೇಂದ್ರಪ್ಪ ಅವರೊಂದಿಗೆ 'ರಾಜನ್‌-ನಾಗೇಂದ್ರ' ಹೆಸರಿನಲ್ಲಿ ಜಂಟಿಯಾಗಿ ಅನೇಕ ಜನಪ್ರಿಯ, ಯಶಸ್ವಿ ಕನ್ನಡ ಚಿತ್ರಗಳಿಗೆ ಸಂಗೀತ ನೀಡಿದ್ದ ರಾಜನ್ ಅವರ ನಿಧನದಿಂದ ಕನ್ನಡ ಚಿತ್ರರಂಗ ಅನಾಥವಾಗಿದೆ ಎಂದು ಕಂಬಿನ ಮಿಡಿದಿದ್ದಾರೆ.

ಚಿತ್ರರಸಿಕರು ಎಂದಿಗೂ ಮರೆಯಲಾರದ ತಮ್ಮ ನೂರಾರು ಸುಮಧುರ ಗೀತೆಗಳ ಮೂಲಕ ರಾಜನ್ ಅವರು ಸದಾ ನೆನಪಿನಲ್ಲಿರುತ್ತಾರೆ. ರಾಜನ್ ಅವರ ಆತ್ಮಕ್ಕೆ ಚಿರಶಾಂತಿಯನ್ನು ಪ್ರಾರ್ಥಿಸುತ್ತೇನೆ. ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ. ಓಂ ಶಾಂತಿ ಎಂದು ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದಾರೆ.

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಂತಾಪ ಸೂಚಿಸಿದ್ದು, ಕನ್ನಡ ಚಲನಚಿತ್ರ ರಂಗದ ಹೆಸರಾಂತ ಹಿರಿಯ ಸಂಗೀತ ನಿರ್ದೇಶಕ ರಾಜನ್ ಅವರು ನಿಧನರಾದ ಸುದ್ದಿ ನನ್ನ ಮನಸ್ಸಿಗೆ ತೀವ್ರ ನೋವನ್ನು ಉಂಟುಮಾಡಿದೆ. ಅನೇಕ ಜನಪ್ರಿಯ ಕನ್ನಡ ಚಲನಚಿತ್ರಗಳಿಗೆ ಸಂಗೀತ ನೀಡಿದ್ದ ರಾಜನ್ ಅವರ ನಿಧನದಿಂದಾಗಿ ಕನ್ನಡ ಚಲನಚಿತ್ರರಂಗವು ಅನಾಥವಾಗಿದೆ. ರಾಜನ್ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ‌ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬದ ಸದಸ್ಯರಿಗೆ ಮತ್ತು ಅಪಾರ ಸಂಗೀತ ಅಭಿಮಾನಿಗಳಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವರು ಸಂತಾಪ ಸೂಚಕದಲ್ಲಿ ತಿಳಿಸಿದ್ದಾರೆ.

ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಟಿ.ರವಿ ಅವರು ಸಹ ರಾಜನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

SCROLL FOR NEXT