ರಾಜ್ಯ

ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ರಾಜ್ಯ ಸರ್ಕಾರ ಪತ್ರ

Nagaraja AB

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದೂಡುವಂತೆ  ರಾಜ್ಯ ಸರ್ಕಾರ  ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

ರಾಜ್ಯದಲ್ಲಿ 6, 025 ಗ್ರಾಮ ಪಂಚಾಯಿತಿಗಳಿದ್ದು, ಅವುಗಳ ಅವಧಿ ಜೂನ್/ ಜುಲೈ ತಿಂಗಳಲ್ಲಿ ಅಂತ್ಯಗೊಂಡಿದೆ. ಕೋವಿಡ್- 19 ಕಾರಣದಿಂದಾಗಿ ವಿಶೇಷ ಸಂದರ್ಭ ಎಂದು ಪರಿಗಣಿಸಿ ಚುನಾವಣೆಯನ್ನು ಮುಂದೂಡಿರುವುದಾಗಿ ಚುನಾವಣಾ ಆಯೋಗ ಮೇ ತಿಂಗಳಲ್ಲಿ ಘೋಷಿಸಿತ್ತು.

ಈ ಮಧ್ಯೆ ಚುನಾವಣೆ ಮುಂದೂಡಿಕೆಯನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು. ನ್ಯಾಯಾಲಯದ ನಿರ್ದೇಶನದಿಂದ  ಎಲ್ಲಾ ಪಂಚಾಯಿತಿಗಳ ಮೀಸಲಾತಿ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪೂರ್ಣಗೊಳಿಸಿದೆ.ಮಾರ್ಗಸೂಚಿ ಹೊರಡಿಸುವ ಮೂಲಕ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. 

ಕಾನೂನು ಸುವ್ಯವಸ್ಥೆ ಕಾಪಾಡಲು ನೆರವಾಗುವಂತೆ ಜಿಲ್ಲಾಧಿಕಾರಿಗಳು, ಐಜಿಪಿಗಳಿಗೆ ಆಯೋಗ ಪತ್ರ ಬರೆದಿದೆ. ಇದನ್ನು ನ್ಯಾಯಾಲಯಕ್ಕೂ ತಿಳಿಸಿದೆ. ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಚುನಾವಣೆ ನಡೆಸಲು ಯೋಜನೆ ಹಾಕಿಕೊಂಡಿದ್ದು, ಸಿದ್ದತಾ ಕಾರ್ಯಗಳು ನಡೆಯುತ್ತಿವೆ.

ಆದರೆ, ಇದೀಗ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಸವರಾಜ್ ಅವರಿಗೆ ಪತ್ರ ಬರೆದಿರುವ ರಾಜ್ಯ ಸರ್ಕಾರ, ಚುನಾವಣೆಯನ್ನು ಮುಂದೂಡುವಂತೆ ಒತ್ತಾಯಿಸಿದೆ. ಕೋವಿಡ್ -19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

94 ಸಾವಿರ ಸದಸ್ಯರಿಗಾಗಿ ಚುನಾವಣೆ ನಡೆಯಲಿದ್ದು, ಎಲ್ಲಾ 6,021 ಗ್ರಾಮ ಪಂಚಾಯಿತಿಗಳಲ್ಲಿ ಲಕ್ಷಾಂತರ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಇದಕ್ಕಾಗಿ ಸುಮಾರು 47 ಸಾವಿರ ಬೂತ್ ಗಳನ್ನು ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಇದರಿಂದಾಗಿ ಮಾರ್ಗಸೂಚಿ ಇದ್ದರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಿಕೆ ಅಸಾಧ್ಯವಾಗಲಿದೆ ಎಂದು ಹೇಳಲಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಆಯುಕ್ತ ಬಸವರಾಜ್, ಜೂನ್ ತಿಂಗಳಿನಲ್ಲಿಯೇ ಚುನಾವಣೆ ನಡೆಯಬೇಕಾಗಿತ್ತು. ಆದರೆ, ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಆಗಲಿಲ್ಲ. ನ್ಯಾಯಾಲಯದ ನಿರ್ದೇಶನದಿಂದ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ. ಇದೀಗ ಸರ್ಕಾರ ನಮಗೆ ಪತ್ರ ಬರೆದಿದೆ. ಕೋರ್ಟ್ ಮುಂದೆ ವಿಚಾರಣೆಗೆ ಹಾಜರಾಗಿ ವಿವರಣೆ ನೀಡುವಂತೆ ಹೇಳಿದ್ದೇವೆ. ಮುಂದಿನ ವಿಚಾರಣೆಯಲ್ಲಿ ಅವರು ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ ಎಂದು ತಿಳಿಸಿದರು.

ಎರಡು ವಿಧಾನಸಭಾ ಚುನಾವಣೆ ಮತ್ತು ವಿಧಾನಪರಿಷತ್ ಚುನಾವಣೆಗಳಿಗೆ ದಿನಾಂಕ ನಿಗದಿಯಾಗಿದ್ದು, ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಚುನಾವಣೆ ನಡೆಸಲು ಸಿದ್ಧವಿರುವುದಾಗಿ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

SCROLL FOR NEXT