ರಾಜ್ಯ

ಬೆಂಗಳೂರು: ಅನ್ಯರ ಡೆಬಿಟ್ ಕಾರ್ಡ್ ಬಳಸಿ ಲಕ್ಷ ಲಕ್ಷ ಹಣ ಡ್ರಾ ಮಾಡುತ್ತಿದ್ದವನ ಬಂಧನ, 1.60 ಲಕ್ಷ ವಶ

Vishwanath S

ಬೆಂಗಳೂರು: ಬೇರೆಯವರ ಡೆಬಿಟ್ ಕಾರ್ಡ್ ಬಳಸಿ ಹಣ ಡ್ರಾ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿ,1.60 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

ತುಮಕೂರು ಮೂಲದ ಅರುಣ್ (30) ಬಂಧಿತ ಆರೋಪಿಯಾಗಿದ್ದು, ಈತನಿಂದ 2 ಮೊಬೈಲ್ ಫೋನ್, 3.07ಗ್ರಾಂ ತೂಕದ ಚಿನ್ನದ ಒಡವೆ, ನಗದು 1.13 ಲಕ್ಷ, ಕರ್ನಾಟಕ ಬ್ಯಾಂಕ್ ನ 1 ಡೆಬಿಟ್ ಕಾರ್ಡ್ ಸೇರಿ 1.6 ಲಕ್ಷ ರೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ತಿಂಗಳ 4ರಂದು ನಾಗಸಂದ್ರದ ನಾಗರಾಜು ಎಂಬುವರು, ಹೆಸರುಘಟ್ಟ ಬಳಿಯ ತ್ರಿವೇಣಿ ಸ್ಕೂಲ್ ಪಕ್ಕದ ಕರ್ನಾಟಕ ಎಟಿಎಂ ಸೆಂಟರ್ ಗೆ ಹಣ ತುಂಬಲು ತೆರಳಿದ್ದಾಗ ಹಿಂಭಾಗದಲ್ಲಿ ‌ನಿಂತಿದ್ದ ವ್ಯಕ್ತಿಯೋರ್ವ ಸಹಾಯ ಮಾಡುವ ನೆಪದಲ್ಲಿ ಡೆಬಿಟ್ ಕಾರ್ಡ್ ಬದಲಾಗಿ ಬೇರೊಂದು ಡೆಬಿಟ್ ಕಾರ್ಡ್ ನೀಡಿ ತಮ್ಮ ಡೆಬಿಟ್ ಕಾರ್ಡ್ ನಿಂದ 32,000ರೂ. ಹಣ ಡ್ರಾ ಮಾಡಿಕೊಂಡು ವಂಚಿಸಿದ್ದಾನೆ ಎಂದು ಆರೋಪಿಸಿ ಬಾಗಲುಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಟಿಎಂ ಸೆಂಟರ್ ಬಳಿ ನಿಂತಾಗ ಹಣ ಡ್ರಾ ಮಾಡಲು ಸಹಾಯ ಕೇಳುವ ಸಾರ್ವಜನಿಕ ರಿಂದ ಅವರ ಡೆಬಿಟ್ ಕಾರ್ಡ್ ಬದಲಾಯಿಸಿ ಆ ಡೆಬಿಟ್ ಕಾರ್ಡ್ ನಿಂದ ಹಣ ಡ್ರಾ ಮಾಡುವುದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿರುದ್ಧ 2017ರಲ್ಲಿ-2 ಹಾಗೂ 2019ರಲ್ಲಿ 4 ಪ್ರಕರಣಗಳು ದಾಖಲಾಗಿತ್ತು. ಜೈಲಿಗೆ ಹೋಗಿದ್ದ ಆತ ಜಾಮೀನಿನ ಮೇಲೆ ಹೊರಬಂದಿದ್ದಾನೆ. ಆರೋಪಿಯ ಬಂಧನದಿಂದಾಗಿ ನಗರದಲ್ಲಿ ದಾಖಲಾಗಿದ್ದ 4 ಪ್ರಕರಣಗಳನ್ನು ಬೇಧಿಸಿದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT