ರಾಜ್ಯ

ಅರ್ಥಶಾಸ್ತ್ರದಲ್ಲಿ 4 ಚಿನ್ನದ ಪದಕ, 7 ನಗದು ಬಹುಮಾನ ಪಡೆದ ಚಾಮರಾಜನಗರ ಕಾನ್ಸ್‌ಟೇಬಲ್

Srinivas Rao BV

ಚಾಮರಾಜನಗರ: ಮಹಿಳಾ ಪೊಲೀಸ್ ಕಾನ್ಸಟೇಬಲ್ ಒಬ್ಬರು ಮೈಸೂರು ವಿವಿಯ ಬಿಎ ಅರ್ಥಶಾಸ್ತ್ರದಲ್ಲಿ ವಿಷಯದಲ್ಲಿ ನಾಲ್ಕು ಚಿನ್ನದ ಪದಕ ಹಾಗೂ 7 ನಗದು ಬಹುಮಾನ ಪಡೆದಿದ್ದಾರೆ.

ಚಾಮರಾಜನರದಲ್ಲಿ ಸಿವಿಲ್ ಪೊಲೀಸ್ ಕಾನ್ಸಟೇಬಲ್ ತರಬೇತಿ ಪಡೆಯುತ್ತಿರುವ ನಂಜನಗೂಡು ತಾಲೂಕಿನ ಕೂಡ್ಲಾಪುರ ಗ್ರಾಮದ ಬೆಳ್ಳಶೆಟ್ಟಿ ಮಗಳು ಕಾವೇರಿ  ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು ಬಡತನದಲ್ಲೂ ಅರಳಿದ ಪ್ರತಿಭೆಯಾಗಿದ್ದಾರೆ.

ತಂದೆ ರೈತರಾಗಿದ್ದು ಹಣದ ಮುಗ್ಗಟ್ಟಿನ ನಡುವೆ ಆಸ್ಥೆಯಿಟ್ಟು ಓದಿದ ಕಾವೇರಿ ಪದವಿ ಪರೀಕ್ಷೆ ಬಳಿಕ ಕಾನ್ಸ್‌ಟೇಬಲ್ ಹುದ್ದೆಗೆ ನೇಮಕವಾಗಿದ್ದಾರೆ. ನಾಲ್ಕು ಚಿನ್ನದಪದಕ ಪಡೆದ ಈ  ಸ್ವರ್ಣ  ಹುಡುಗಿಗೆ ಎಂಎ ಮಾಡಲು ಆರ್ಥಿಕ ಸಮಸ್ಯೆ ಎದುರಾಗಿದ್ದರಿಂದ ನೌಕರಿ ಮಾಡುತ್ತಲೇ ಪಿಎಸ್ಐ ಜೊತೆಗೆ ಕೆಪಿಎಸ್ಸಿ ಪರೀಕ್ಷೆಗಳನ್ನು ಬರೆಯಲು ತಯಾರಿ ನಡೆಸುತ್ತಿದ್ದಾರೆ.

ಚಿನ್ನದ ಹುಡುಗಿ ಕುರಿತು ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಪ್ರತಿಕ್ರಿಯಿಸಿ, ಬಿಎ ಅರ್ಥಶಾಸ್ತ್ರದಲ್ಲಿ ವಿಶ್ವವಿದ್ಯಾಲಯಕ್ಕೆ ಟಾಪರ್ ಆಗುವ ಮೂಲಕ ಇಲಾಖೆಗೆ ಕೀರ್ತಿ ತಂದಿದ್ದಾರೆ. ಕಾನ್ಸ್‌ಟೇಬಲ್ ಹುದ್ದೆಯಲ್ಲೇ ಮುಂದುವರಿಯದೇ ಪಿಎಸ್ಐ, ಕೆಎಎಸ್ ಪರೀಕ್ಷೆಗಳನ್ನು ಅವರು ತೆಗೆದುಕೊಳ್ಳಬೇಕು. ಅವರಿಗೆ ಉಜ್ವಲ ಭವಿಷ್ಯವಿದೆ ಎಂದು ಅಭಿನಂದಿಸಿದರು.

ಇನ್ನು, ಕಾವೇರಿ ಚಿನ್ನದ ಪದಕ ಪಡೆದಿರುವುದಕ್ಕೆ ಸಹೋದ್ಯೋಗಿಗಳು ಕೂಡ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ವಿದ್ಯೆಗೆ ಹಣ-ಆಸ್ತಿಗಿಂತ ಕಠಿಣ ಪರಿಶ್ರಮ, ಶ್ರದ್ಧೆ ಮುಖ್ಯ ಎಂಬುದಕ್ಕೆ ಚಿನ್ನದ ಹುಡುಗಿ ನಿದರ್ಶನವಾಗಿದ್ದಾರೆ.

ವರದಿ: ಗುಳಿಪುರ ನಂದೀಶ. ಎಂ

SCROLL FOR NEXT