ರಾಜ್ಯ

ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ನಿಯಮಗಳಿಗೆ ಸಂಪುಟ ಒಪ್ಪಿಗೆ

Lingaraj Badiger

ಬೆಂಗಳೂರು: ಖಾಸಗಿ ಹಣಕಾಸು ಸಂಸ್ಥೆಗಳ ಮೇಲೆ ಹಾಗೂ ಹೆಚ್ಚಿನ ಬಡ್ಡಿಯ ಆಸೆ ತೋರಿಸಿ ಸಾರ್ವಜನಿಕರನ್ನು ವಂಚಿಸುವ ಚಿಟ್ ಫಂಡ್ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವ ಕರ್ನಾಟಕ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ನಿಯಮಗಳು-2020ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಸಚಿವ ಸಂಪುಟದಲ್ಲಿ ಹಲವು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಕರ್ನಾಟಕ ಭೂ ಸುಧಾರಣೆಗಳ(ಎರಡನೇ ತಿದ್ದುಪಡಿ) ವಿಧೇಯಕ-2020ಕ್ಕೆ ಅನುಮೋದನೆ ನೀಡಲಾಗಿದೆ. ಕಳೆದ ಬಾರಿಯ ಸಂಪುಟದಲ್ಲಿ ಒಂದನೇ ತಿದ್ದುಪಡಿಗೆ ಒಪ್ಪಿಗೆ ಸೂಚಿಸಿ, ಸುಗ್ರೀವಾಜ್ಞೆ ಹೊರಡಿಸಲು ಒಪ್ಪಿಗೆ ಸೂಚಿಸಲಾಗಿತ್ತು.

ಉಡುಪಿ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯನ್ನು 250 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಿ, ಈ ಆಸ್ಪತ್ರೆ ಕಟ್ಟಡ, ಸಿಬ್ಬಂದಿ ವಸತಿ ಗೃಹಗಳ ಹಾಗೂ ಇತರ ಮೂಲಭೂತ ಸೌಲಭ್ಯ ಕಾಮಗಾರಿಗಳನ್ನು 115 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ.

ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಯೋಜನೆಯಡಿಯಲ್ಲಿ ಕರಾವಳಿ ಮೂರು ಜಿಲ್ಲೆಗಳಿಗೆ ಹವಾಮಾನ ಮುನ್ಸೂಚನೆ ಮತ್ತು ಪರಿಸರ ಪದ್ಧತಿಯನ್ನು ಅನುಷ್ಠಾನಗೊಳಿಸುವ 26.92 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಬಹುಗ್ರಾಮ ಯೋಜನೆಯಡಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಗೌತಮಪುರ ಮತ್ತು ಇತರ 127 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪರಿಷ್ಕೃತ ಮೊತ್ತ 91.50 ಕೋಟಿ ರೂ.ಗಳಿಗೆ ಆಡಳಿತ್ಮಾಕ ಅನುಮೋದನೆ ನೀಡಲಾಗಿದೆ.

3ವೇ ಸ್ಟೇ ಎ ಫ್ರಾನ್ಸ್ ಕಂಪನಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಚಿಕ್ಕನಾಗಮಂಗಲದಲ್ಲಿ 500 ಮೆಟ್ರಿಕ್ ಟನ್ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕವನ್ನು ಸ್ಥಾಪಿಸಲು ಅನುಮೋದನೆ ನೀಡಿ 2018, ಮಾರ್ಚ್ 8ರಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ.

ಭಾಗ್ಯಲಕ್ಷ್ಮೀ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮದ ಬದಲು ಅಂಚೆ ಇಲಾಖೆ ಮೂಲಕ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಂತೆ ಮರು ವಿನ್ಯಾಸಗೊಳಿಸಿ 2020-21ನೇ ಸಾಲಿನಿಂದ ಮುಂದುವರಿಸಲು ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣಕ್ಕೆ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಯ 109.81 ಕೋಟಿ ರೂ. ಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕು, ತಿಮ್ಮಾಪುರದ ರನ್ನನಗರದಲ್ಲಿನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳ ಅವಧಿಗೆ ಎಲ್ ಆರ್ ಒಟಿ ಆಧಾರದ ಮೇಲೆ ಖಾಸಗಿಯವರಿಗೆ ಗುತ್ತಿಗೆ ನೀಡಲು ಅನುಮತಿ ನೀಡಲಾಗಿದೆ. 
ಕೇಂದ್ರೀಯ ಪ್ಲಾಸ್ಟಿಕ್ ಇಂಜನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ –ಸಿಪೆಟ್ ನ ಅತ್ಯಾಧುನಿಕ ಪಾಲಿಮರ್ ವಿನ್ಯಾಸ ಮತ್ತು ಅಭಿವೃದ್ಧಿ ಸಂಶೋಧನಾ ಪ್ರಯೋಗಾಲಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಹೆಚ್ಚುವರಿ ಕಟ್ಟಡ ನಿರ್ಮಾಣ ವೆಚ್ಚ 19.04 ಕೋಟಿ ರೂ.ಗಳ ಪೈಕಿ 9.52 ಕೋಟಿ ರೂ. (ಶೇಕಡಾ 50ರಷ್ಟು) ರಾಜ್ಯ ಸರ್ಕಾರದಿಂದ ಅನುಮೋದನೆ ನೀಡಲು ಒಪ್ಪಿಗೆ ನೀಡಲಾಗಿದೆ.

ಪಶ್ಚಿಮ ವಾಹಿನಿ ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಳಿಯೂರು ಗ್ರಾಮದ ಬಿಳಿಯೂರು ಎಂಬಲ್ಲಿ ಕಿಂಡಿ ಅಣೆಕಟ್ಟು ರಚನೆ ಕಾಮಗಾರಿಯ 46.70 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 

ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ)ನಿಯಮಗಳು-2020ಕ್ಕೆ ಅನುಮೋದನೆ ನೀಡಲಾಗಿದೆ. ಕರ್ನಾಟಕ ನಾಗರಿಕ ಸೇವಾ (ಶೀಘ್ರಲಿಪಿಗಾರರ ಮತ್ತು ಬೆರಳಚ್ಚುಗಾರರ ಹುದ್ದೆಗಳ ನೇಮಕಾತಿ)ತಿದ್ದುಪಡಿ ನಿಯಮಗಳ-2020, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಹಾಗೂ ಮೇಲ್ಮನವಿ) ತಿದ್ದುಪಡಿ ನಿಯಮಗಳು-2020ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಅದೇ ರೀತಿ, ಸಚಿವಾಲಯದ ನಿವೃತ್ತ ಆಪ್ತ ಕಾರ್ಯದರ್ಶಿ ಜಿ.ರವಿ ಅವರನ್ನು ರಾಜ್ಯಪಾಲರ ಸಚಿವಾಲಯದ ಆಪ್ತ ಕಾರ್ಯದರ್ಶಿ ಹುದ್ದೆಗೆ 2020, ಏಪ್ರಿಲ್ 2ರಿಂದ 2020 ಜೂನ್ 6ರವರೆಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿರುವ ಕ್ರಮವನ್ನು ಸ್ಥಿರೀಕರಿಸಲಾಗಿದೆ.

SCROLL FOR NEXT