ರಾಜ್ಯ

ಕಿತ್ತೂರು ಉತ್ಸವಕ್ಕೆ ವಿದ್ಯುಕ್ತ ಚಾಲನೆ; ವೀರಜ್ಯೋತಿಗೆ ಅದ್ಧೂರಿ ಸ್ವಾಗತ

Shilpa D

ಬೆಳಗಾವಿ: ವಿಜಯದ ಧ್ಯೋತಕವಾಗಿರುವ "ವೀರಜ್ಯೋತಿ" ಯನ್ನು ಅದ್ಧೂರಿಯಾಗಿ ಸ್ವಾಗತಿಸುವ ಮೂಲಕ "ಕಿತ್ತೂರು ಉತ್ಸವ-2020"ಕ್ಕೆ ಚಾಲನೆ ನೀಡಲಾಯಿತು. ಚನ್ನಮ್ಮನ ಕಿತ್ತೂರಿನ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ವೀರಜ್ಯೋತಿಯನ್ನು ಬರಮಾಡಿಕೊಳ್ಳಲಾಯಿತು.

ಕಿತ್ತೂರು ಶಾಸಕ ಮಹಾಂತೇಶ ದೊಡಗೌಡ್ರ ಅವರು ಜ್ಯೋತಿ ಹೊತ್ತುಬಂದ ವಾಹನಕ್ಕೆ ಪೂಜೆ ಸಲ್ಲಿಸಿ ಜ್ಯೋತಿಯನ್ನು ಸ್ವಾಗತಿಸಿದರು. ಬೈಲಹೊಂಗಲದಲ್ಲಿರುವ ಚನ್ನಮ್ಮನ ಸಮಾಧಿ ಸ್ಥಳದಿಂದ ಇಂದು ಬೆಳಿಗ್ಗೆ ಹೊರಟ ಜ್ಯೋತಿಯನ್ನು ನೂರಾರು ಜನರ ಹರ್ಷೋದ್ಘಾರಗಳ ಮಧ್ಯೆ ಸ್ವಾಗತಿಸಲಾಯಿತು.

ಇದಾದ ಬಳಿಕ ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ನಿಚ್ಚಣಿಕೆಯ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಮಠದ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು.

ಚನ್ನಮ್ಮ ವೃತ್ತದಲ್ಲಿ ಇರುವ ಕಿತ್ತೂರು ಚನ್ನಮ್ಮ ಪುತ್ಥಳಿಗೆ ಸ್ವಾಮೀಜಿಯವರು, ಗಣ್ಯರು ಹಾಗೂ ಜನಪ್ರತಿನಿಧಿಗಳು ಮಾಲಾರ್ಪಣೆ ನೆರವೇರಿಸಿದರು. ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಉಪ ವಿಭಾಗಾಧಿಕಾರಿಗಳಾದ ಶಿವಾನಂದ ಭಜಂತ್ರಿ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕಿತ್ತೂರು ಪ್ರವೇಶದ್ವಾರದ ಬಳಿಯ ಸಂಗೊಳ್ಳಿ ರಾಯಣ್ಣ ಮತ್ತು ಅಮಟೂರು ಬಾಳಪ್ಪ ಪುತ್ಥಳಿಗಳಿಗೂ ಮಾಲಾರ್ಪಣೆ ಮಾಡಲಾಯಿತು. ಚನ್ನಮ್ಮ ವೃತ್ತದಿಂದ ಆರಂಭಗೊಂಡ ವೀರಜ್ಯೋತಿಯ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತ ನಿಚ್ಚಣಿಕಿ ಶ್ರೀ ಮಡಿವಾಳೇಶ್ವರ ಮಠದವರೆಗೆ ತೆರಳಿತು.

ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಹಾಗೂ ಸ್ಥಳೀಯ ಜನರ ಒಮ್ಮತಾಭಿಪ್ರಾಯದಂತೆ ಅತ್ಯಂತ ಸರಳ ಮತ್ತು ಸಾಂಕೇತಿಕ ರೀತಿಯಲ್ಲಿ ಕಿತ್ತೂರು ಉತ್ಸವ ಆಚರಿಸಲಾಯಿತು. ಪ್ರತಿವರ್ಷ ಮೂರು‌ ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಕಿತ್ತೂರು ಉತ್ಸವ ಆಚರಿಸಲಾಗುತ್ತಿತ್ತು. ಕೋವಿಡ್-19 ಕಾರಣಕ್ಕೆ ಈ ಬಾರಿ ಕುಸ್ತಿಹಬ್ಬ, ಕ್ರೀಡಾ ಸ್ಪರ್ಧೆಗಳು, ವಿಚಾರ ಸಂಕಿರಣ ಹಾಗೂ ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಂಡಿರಲಿಲ್ಲ.

SCROLL FOR NEXT