ರಾಜ್ಯ

ಮಹಾ ಮಳೆಗೆ ಬೆಂಗಳೂರು ತತ್ತರ: ಮಳೆಬಾಧಿತ ಪ್ರದೇಶಗಳಿಗೆ ಸಿಎಂ ಭೇಟಿ, ತಲಾ 25 ಸಾವಿರ ಪರಿಹಾರ ಘೋಷಣೆ

Lingaraj Badiger

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶನಿವಾರ ಮಹತ್ವದ ಸಭೆ ನಡೆಸಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಬಿಬಿಎಂಪಿ ಉನ್ನತಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಅಲ್ಲದೇ ಮಳೆಯಿಂದ ತೀವ್ರ ಬಾಧಿತವಾಗಿರುವ ಹೊಸಕೆರೆಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಸಿಎಂ ಯಡಿಯೂರಪ್ಪ ಅವರು, ಕಂದಾಯ ಸಚಿವ ಆರ್. ಅಶೋಕ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತಿತರರ ಜತೆ ಭೇಟಿ ನೀಡಿ, ಪರಿಶೀಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮಳೆಯಿಂದ ಹಾನಿಗೊಳಗಾದ ಪ್ರತೀ ಕುಟುಂಬಕ್ಕೆ ತಕ್ಷಣ ತಲಾ 25 ಸಾವಿರ ರೂ.ಚೆಕ್ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ಒಪ್ಪಿಕೊಂಡ ಸಿಎಂ, ಶೀಘ್ರದಲ್ಲೇ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವುದಾಗಿ ಭರವಸೆ ನೀಡಿದರು.

ಸಮೀಕ್ಷೆ ನಡೆಸಿ ಪರಿಹಾರವನ್ನು ಹಸ್ತಾಂತರಿಸುವಾಗ ಅಧಿಕಾರಿಗಳು ಪ್ರಾಮಾಣಿಕವಾಗಿರಬೇಕು. ಯಾವುದೇ ಹಣದ ದುರುಪಯೋಗ ಇರಬಾರದು. ನನಗೆ ನೀಡಿದ ಮಾಹಿತಿಯ ಪ್ರಕಾರ, ಸುಮಾರು 650-800 ಮನೆಗಳಿಗೆ ಪ್ರವಾಹದ ನೀರು ಹರಿಯುತ್ತಿರುವುದನ್ನು ಕಂಡು ಬಂದಿದೆ ಎಂದು ಸಿಎಂ ಹೇಳಿದರು.

SCROLL FOR NEXT