ಜಂಬೂ ಸವಾರಿ ಚಿತ್ರಗಳು 
ರಾಜ್ಯ

ದಸರಾ ಮಹೋತ್ಸವ ಯಶಸ್ವಿ, ಲಕ್ಷಾಂತರ ಜನರಿಂದ ವೀಕ್ಷಣೆ, 10 ಕೋಟಿ ರೂ. ಖರ್ಚು: ಸಚಿವ ಸೋಮಶೇಖರ್

ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2020ರ ಕಾರ್ಯಕ್ರಮವು ಸರಳವಾಗಿ, ಸಂಪ್ರದಾಯದಂತೆ ಬಹಳ ಅಚ್ಚುಕಟ್ಟಾಗಿ ನೆರವೇರಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸೂಕ್ತ ಪ್ರಚಾರ ನೀಡಿ ಪ್ರೋತ್ಸಾಹಿಸಿ ಸಹಕರಿಸಿದ ಎಲ್ಲಾ ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2020ರ ಕಾರ್ಯಕ್ರಮವು ಸರಳವಾಗಿ, ಸಂಪ್ರದಾಯದಂತೆ ಬಹಳ ಅಚ್ಚುಕಟ್ಟಾಗಿ ನೆರವೇರಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸೂಕ್ತ ಪ್ರಚಾರ ನೀಡಿ ಪ್ರೋತ್ಸಾಹಿಸಿ ಸಹಕರಿಸಿದ ಎಲ್ಲಾ ಮಾಧ್ಯಮಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ  ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈ ಬಾರಿಯ ದಸರಾ ಮಹೋತ್ಸವ ಐತಿಹಾಸಿಕವಾಗಿ ನೆನಪು ಉಳಿಯುವಂತಹ ಕಾರ್ಯಕ್ರಮ. ಸರಳವಾಗಿ, ಸಾಂಪ್ರದಾಯಿಕವಾಗಿ, ವರ್ಚುವಲ್ ಆಗಿ ಈ ಬಾರಿ ದಸರಾ ಆಚರಿಸಲಾಗಿದೆ. ಕೊರೋನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಸೀಮಿತ  ಸಂಖ್ಯೆಯ ಜನರಿಗೆ ಮಾತ್ರ ಅವಕಾಶ ನೀಡಿ ದಸರಾ ಆಚರಿಸುವಂತೆ ತಾಂತ್ರಿಕ ಸಲಹಾ ಸಮಿತಿ ನೀಡಿದ್ದ ಮಾರ್ಗಸೂಚಿಯಂತೆ ಸೀಮಿತ ಸಂಖ್ಯೆಯಲ್ಲಿ ಸೇರಿ ಆಚರಿಸಲಾಯಿತು ಎಂದರು.

ಸರಳವಾಗಿ ದಸರಾ ಆಚರಿಸಿದ್ದರೂ ಸಹ ಅರ್ಥಪೂರ್ಣವಾಗಿ ದಸರಾ ಆಚರಿಸಿದ್ದೇವೆ. ಕೊರೊನಾ ವಿರುದ್ಧ ಹೋರಾಡುತ್ತಿರುವ ಕೊರೊನಾ ಯೋಧರಿಗೆ ಗೌರವ ಸಲ್ಲಿಸುವ ಕೆಲಸ ಕೂಡ ಈ ಬಾರಿ ಮಾಡಲಾಯಿತು. ಖ್ಯಾತ ವೈದ್ಯರಾದ ಡಾ. ಸಿ.ಎನ್. ಮಂಜುನಾಥ್ ಅವರು ದಸರಾ ಉದ್ಘಾಟನೆ ನೆರವೇರಿಸಿದರು.  ವೈದ್ಯರೊಬ್ಬರು ದಸರಾ ಉದ್ಘಾಟಿಸಿರುವುದು ಸಹ ಇದೆ ಮೊದಲು. ವೈದ್ಯರು, ದಾದಿಯರು, ಆಶಾ ಕಾರ್ಯಕರ್ತರು, ಪೊಲೀಸರು, ಇನ್ನೂ ಅನೇಕ ವರ್ಗದವರು ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಅವರೆಲ್ಲರ ಪ್ರತಿನಿಧಿಗಳಿಗೆ ದಸರಾ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸಿ, ಕೊರೊನಾ ಯೋಧರಿಗೆ ಗೌರವ  ಸಮರ್ಪಣೆ ಮಾಡಲಾಯಿತು ಎಂದು ವಿವರ ನೀಡಿದರು.

ಇತ್ತೀಚೆಗೆ ನಮ್ಮನ್ನು ಅಗಲಿದ ಖ್ಯಾತ ಗಾಯಕ, ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ನೆನಪಿನಲ್ಲಿ ಒಂದು ದಿನ ಕಾರ್ಯಕ್ರಮ ನಡೆಯಿತು. ಇದು ಸಹ ದಸರಾ ಮಹೋತ್ಸವದಲ್ಲಿ ಅಗಲಿದ ಗಣ್ಯರೊಬ್ಬರ ಹೆಸರಿನಲ್ಲಿ ನುಡಿನಮನ ಕಾರ್ಯಕ್ರಮ ಆಯೋಜಿರುವುದು ಸಹ ಇದೆ ಮೊದಲು. ಚಾಮುಂಡಿಬೆಟ್ಟ ಹಾಗೂ  ಅರಮನೆ ಆವರಣಕ್ಕೆ ಸೀಮಿತವಾಗಿ ಈ ಬಾರಿ ದಸರಾ ಆಚರಿಸಲು ತೆಗೆದುಕೊಂಡ ನಿರ್ಧಾರದಂತೆ ಈ ಎರಡು ಸ್ಥಳಗಳಲ್ಲಿ ಎಲ್ಲಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನೆರವೇರಿದೆ. ಪ್ರತಿವರ್ಷ ಸುಮಾರು 12 ರಿಂದ 15 ಆನೆಗಳು ಜಂಬುಸವಾರಿಯಲ್ಲಿ ಭಾಗವಹಿಸುತ್ತಿದ್ದವು. ಈ ವರ್ಷ ಸರಳವಾಗಿ ಆಚರಿಸಿದ್ದರಿಂದ 5  ಆನೆಗಳನ್ನು ಮಾತ್ರ ಕರೆಸಲಾಗಿತ್ತು. ಇದೆ ಮೊದಲ ಬಾರಿಗೆ ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು ಯಶಸ್ವಿಯಾಗಿ ಜಂಬುಸವಾರಿ ನಡೆಸಿಕೊಟ್ಟಿದೆ ಎಂದರು.

ಕಳೆದ ವರ್ಷ 100 ಕಿ.ಮೀ. ಉದ್ದದ ದೀಪಾಲಂಕಾರ ಮಾಡಲಾಗಿತ್ತು. ಆದರೆ ಈ ವರ್ಷ ಸುಮಾರು 50 ಕಿ.ಮೀ.ಗೆ ಇಳಿಸಲಾಯಿತು. ನವರಾತ್ರಿಯ ದಿನಗಳಲ್ಲಿ ಹೆಚ್ಚು ಜನ ಒಂದೆಡೆ ಸೇರದಂತೆ ಎಲ್ಲಾ ಮುಂಜಾಗೃತಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ. ಈ ಸಂದರ್ಭದಲ್ಲಿ ಕೊರೊನಾ ಪರೀಕ್ಷೆಯನ್ನು  ಹೆಚ್ಚಿಸಲಾಯಿತು. ಪರೀಕ್ಷೆ ಪ್ರಮಾಣ ಹೆಚ್ಚಾದರೂ ಸೋಂಕಿತರ ಸಂಖ್ಯೆಗೆ ಸೆಪ್ಟೆಂಬರ್‌ಗೆ ಹೋಲಿಸಿದರೆ ಕಡಿಮೆ ಬರುತ್ತಿರುವುದು ಸಮಾಧಾನಕರ ಸಂಗತಿ. ಜಂಬುಸವಾರಿ ಮೆರವಣಿಗೆಯಲ್ಲಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಒಂದು ಸ್ತಬ್ದಚಿತ್ರವನ್ನು ಸಹ ಸೇರಿಸಲಾಯಿತು.

ಲಕ್ಷಾಂತರ ಮಂದಿಯಿಂದ ದಸರಾ ವೀಕ್ಷಣೆ!
ಈ ಸಾಲಿನ ದಸರಾವನ್ನು "ಸರಳ, ಸಾಂಪ್ರದಾಯಿಕ ಹಾಗೂ ವರ್ಚುವಲ್‌" ದಸರಾ ಎಂದು ಕರೆಯಲಾಗಿದೆ. ಅದರಂತೆ ಎಲ್ಲಾ ಕಾರ್ಯಕ್ರಮಗಳನ್ನು ಸಾರ್ವಜನಿಕರು ವೀಕ್ಷಿಸಲು ಅನುಕೂಲವಾಗುವಂತೆ ವರ್ಚುವಲ್ ಆಗಿ ಪ್ರಸಾರ ಮಾಡಲಾಯಿತು. ಲಕ್ಷಾಂತರ ಜನರು ದೂರದರ್ಶನದಲ್ಲಿ, ಫೇಸ್‌ ಬುಕ್‌ನಲ್ಲಿ,  ಯೂಟ್ಯೂಬ್ ‌ನಲ್ಲಿ, ಹಲವಾರು ಮಾಧ್ಯಮಗಳಲ್ಲಿ, ಮಾಧ್ಯಮಗಳ ಸೋಷಿಯಲ್ ಮೀಡಿಯಾದಲ್ಲಿ ದಸರಾ ವೀಕ್ಷಣೆ ಮಾಡಿದ್ದಾರೆ. ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೇಸ್ ಬುಕ್ ಒಂದರಲ್ಲೇ ಜಂಬುಸವಾರಿ ಕಾರ್ಯಕ್ರಮವನ್ನು ಲಕ್ಷಾಂತರ ಜನ ನೋಡಿದ್ದಾರೆ. ಒಟ್ಟು ವಾರ್ತಾ ಇಲಾಖೆಯ ಫೇಸ್ ‌ಬುಕ್  ಪೇಜ್‌ನಲ್ಲಿ ಎಲ್ಲಾ ಕಾರ್ಯಕ್ರಮಗಳು ಸೇರಿ ಸುಮಾರು 6 ಲಕ್ಷ ವೀವ್ಸ್ ಆಗಿದೆ. ಇದಲ್ಲದೆ ಹಲವಾರು ಮಾಧ್ಯಮಗಳಿಗೆ ಡೈರೆಕ್ಟ್ ಲಿಂಕ್ ಕೊಡಲಾಗಿತ್ತು. ಅಲ್ಲಿಯೂ ಕೂಡ ಲಕ್ಷಾಂತರ ಜನರ ನೋಡಿ, ಸಂಭ್ರಮಿಸಿದ್ದಾರೆ.

ದಸರಾ ಆಯೋಜಿಸಲು ಸರ್ಕಾರದಿಂದ 10 ಕೋಟಿ ರೂ. ಅನುದಾನ ಮತ್ತು ಮುಡಾದಿಂದ 5 ಕೋಟಿ ರೂ. ಅನುದಾನ ಒದಗಿಸುವುದು ಎಂದು ನಿರ್ಧಾರವಾಗಿತ್ತು. ಆದರೆ ದಸರಾವನ್ನು ಸರ್ಕಾರ ನೀಡಿದ 10 ಕೋಟಿ ರೂ. ಅನುದಾನದಲ್ಲೇ ಪೂರ್ಣಗೊಳಿಸಲಾಗಿದ್ದು, ಮುಡಾ ಘೋಷಿಸಿದ್ದ 5 ಕೋಟಿ ರೂ. ಅನುದಾನವನ್ನು ಪಡೆದಿರುವುದಿಲ್ಲ. ಸರ್ಕಾರದ ಅನುದಾನದಲ್ಲೂ ಯಾವುದಕ್ಕೆ ಎಷ್ಟು ಖರ್ಚಾಗಿದೆ ಎಂಬುದನ್ನು ನವೆಂಬರ್ 1ರಂದು ತಿಳಿಸಲಾಗುವುದು. ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಮೈಸೂರು ರಾಜಮನೆತನ ಮಹಾರಾಣಿ ಪ್ರಮೋದಾದೇವಿ ಒಡೆಯರ್ ಅವರು,  ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು, ಮೈಸೂರಿನ ಮಹಾಜನರು, ಸಂಪೂರ್ಣ ಸಹಕಾರ ನೀಡಿ, ಪ್ರೋತ್ಸಾಹಿಸಿದ್ದಾರೆ. ಅದಕ್ಕಾಗಿ ಅವರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಸೋಮಶೇಖರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT