ಚಿಕಿತ್ಸೆ ಪಡೆದು ಗುಣಮುಖರಾದರೂ ಬೆನ್ನುಬಿಡದ ಹೆಮ್ಮಾರಿ ಕೊರೋನಾ: ಪೋಸ್ಟ್ ಕೋವಿಡ್ ಕೇರ್ ಕೇಂದ್ರ ತೆರೆದ ರಾಮಯ್ಯ ಆಸ್ಪತ್ರೆ
ಚಿಕಿತ್ಸೆ ಪಡೆದು ಸೋಂಕಿನಿಂದ ಗುಣಮುಖರಾದರೂ ಬೆನ್ನುಬಿಡದಂತೆ ಹೆಮ್ಮಾರಿ ಕೊರೋನಾ ಕಾಡುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಗುಣಮುಖರಾದ ಬಳಿಕ ಜನರ ಆರೈಕೆಗಾಗಿ ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಯು ಪೋಸ್ಟ್ ಕೋವಿಡ್ ಕೇರ್ ಕೇಂದ್ರಕ್ಕೆ ಶನಿವಾರ ಚಾಲನೆ ನೀಡಿದೆ.
ಬೆಂಗಳೂರು: ಚಿಕಿತ್ಸೆ ಪಡೆದು ಸೋಂಕಿನಿಂದ ಗುಣಮುಖರಾದರೂ ಬೆನ್ನುಬಿಡದಂತೆ ಹೆಮ್ಮಾರಿ ಕೊರೋನಾ ಕಾಡುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ಗುಣಮುಖರಾದ ಬಳಿಕ ಜನರ ಆರೈಕೆಗಾಗಿ ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಯು ಪೋಸ್ಟ್ ಕೋವಿಡ್ ಕೇರ್ ಕೇಂದ್ರಕ್ಕೆ ಶನಿವಾರ ಚಾಲನೆ ನೀಡಿದೆ.
ಕೊರೋನಾದಿಂದ ಗುಣಮುಖರಾದರೂ ಕೂಡ ಸಾಕಷ್ಟು ಜನರಲ್ಲಿ ಈಗಲು ಉಸಿರಾಟ ಸಮಸ್ಯೆ, ಜ್ವರ, ಆಯಾಸ ಮತ್ತು ದಣಿವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಇಂತಹವರ ಆರೈಕೆಗಾಗಿ ಪೋಸ್ಟ್ ಕೋವಿಡ್ ಕೇರ್ ಕೇಂದ್ರಗಳನ್ನು ತೆರೆಯಬೇಕು ಎಂದು ಆರೋಗ್ಯ ತಜ್ಞರು ಸಲಹೆಗಳನ್ನು ನೀಡುತ್ತಿದ್ದಾರೆ. ಇದರಂತೆ ಎಂ.ಎಸ್.ರಾಮಯ್ಯ ಆಸ್ಪತ್ರೆಯು ಪೋಸ್ಟ್ ಕೋವಿಡ್ ಕೇರ್ ಕೇಂದ್ರಕ್ಕೆ ಚಾಲನೆ ನೀಡಿದ್ದು, ಈ ಕೇಂದ್ರದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರಾದರೂ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವ ಕಾರ್ಯವನ್ನು ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಎಸ್.ಸಚ್ಚಿದಾನಂದ ಅವರು ಮಾತನಾಡಿ, ಕೊರೋನಾ ಒಂದು ಅರ್ಥವಾಗದ ವಿಚಿತ್ರ ವೈರಸ್ ಆಗಿದೆ. ಪ್ರತೀನಿತ್ಯ ವೈದ್ಯಕೀಯ ಸಮುದಾಯಕ್ಕೆ ಕೊರೋನಾ ಹೊಸ ಹೊಸ ಸವಾಲುಗಳನ್ನು ನೀಡುತ್ತಿದೆ. ಈ ಎಲ್ಲಾ ಸವಾಲುಗಳ ನಡುವಲ್ಲೂ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ರೋಗದ ದೀರ್ಘಕಾಲೀನ ಪರಿಣಾಮಗಳು ಏನೆಂಬುದು ಇನ್ನೂ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.
ಕೋವಿಡ್ನಿಂದ ಚೇತರಿಸಿಕೊಳ್ಳುತ್ತಿರುವ ಜನರಲ್ಲಿ ಇದೀಗ ಆಯಾಸ, ಉಸಿರಾಟದ ತೊಂದರೆಗಳು, ನರವೈಜ್ಞಾನಿಕ ಸಮಸ್ಯೆಗಳು, ಮಾನಸಿಕ ಆರೋಗ್ಯ ಸಮಸ್ಯೆಗಳು ಸೇರಿದಂತೆ ಅನೇಕ ಸಮಸ್ಯೆಗಳ ಹೇಳಿಕೊಂಡು ಜನರು ಬರುತ್ತಿದ್ದಾರೆ. ಈ ಹಿಂದೆ ಸೋಂಕಿಗೊಳಗಾದ ಜನರಲ್ಲಿ ಕೇವಲ ಶ್ವಾಸಕೋಶ ಹಾಗೂ ಉಸಿರಾಟ ಸಮಸ್ಯೆಯಷ್ಟೇ ಕಾಣಿಸಿಕೊಳ್ಳುತ್ತಿತ್ತು. ಆದರೆ, ಇಂದು ಸೋಂಕಿಗೊಳಗಾಗುತ್ತಿರುವ ಮನುಷ್ಯದ ಬಹುತೇಕ ಅಂಗಾಂಗಗಳ ಮೇಲೆ ಕೊರೋನಾ ಪರಿಣಾಮ ಬೀರುತ್ತಿದೆ. ಇಂತಹ ಜನರಿಗೆ ಚಿಕಿತ್ಸೆ ನೀಡಲು ಪೋಸ್ಟ್ ಕೋವಿಡ್ ಕೇರ್ ಕೇಂದ್ರ ಸಹಾಯಕವಾಗಲಿದೆ ಎಂದು ತಿಳಿಸಿದ್ದಾರೆ.
ನರವಿಜ್ಞಾನಿಗಳು, ವೈದ್ಯರು ಮತ್ತು ಇತರ ತಜ್ಞರ ಸಮರ್ಪಿತ ತಂಡ ಆಸ್ಪತ್ರೆಯಲ್ಲಿದ್ದು, ಎಷ್ಟು ಸಂಖ್ಯೆಯಲ್ಲಿ ಬೇಕಾದರೂ ಜನರು ಆಸ್ಪತ್ರೆಗೆ ದಾಖಲಾಗಬಹುದಾಗಿದೆ. ಈ ವರೆಗೂ ಆಸ್ಪತ್ರೆಯಲ್ಲಿ 2000 ಜನ ರೋಗಿಗಳು ದಾಖಲಾಗಿದ್ದು, ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಈ ಕುರಿತು ನಮ್ಮ ಬಳಿ ಎಲ್ಲಾ ರೀತಿಯ ಮಾಹಿತಿಗಳಿವೆ. ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದ ರೋಗಿಗಳನ್ನು ಇದೀಗ ಮತ್ತೆ ಆಸ್ಪತ್ರೆಗೆ ಬರುವಂತೆ ತಿಳಿಸುತ್ತಿದ್ದೇವೆ. ಚಿಕಿತ್ಸೆ ಬಳಿಕ ಯಾವುದಾದರೂ ಸಮಸ್ಯೆಯಿದೆಯೇ ಎಂದು ಕೇಳಿ ಸಮಸ್ಯೆ ಇರುವವರಿಗೆ ಚಿಕಿತ್ಸೆ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇತರೆ ಆಸ್ಪತ್ರೆಗಳೂ ಕೂಡ ರೋಗಿಗಳನ್ನು ಸಂಪರ್ಕಿಸಿ, ಪೋಸ್ಟ್ ಕೋವಿಡ್ ಕೇರ್ ಕೇಂದ್ರಕ್ಕೆ ಕಳುಹಿಸಬಹುದಾಗಿದೆ ಎಂದು ರಾಮಯ್ಯ ವೈದ್ಯಕೀಯ ಕಾಲೇದು ಆಸ್ಪತ್ರೆಯ ಉಪ ಪ್ರಾಂಶುಪಾಲ ಡಾ.ಹರೀಶ್ ಕೆ ಅವರು ಹೇಳಿದ್ದಾರೆ.