ರಾಜ್ಯ

ಪ್ರವಾಹ ಸಮೀಕ್ಷೆ ಪೂರ್ಣಗೊಳಿಸಿದ ಕೇಂದ್ರ ತಂಡ: ರಾಜ್ಯದ ಅಧಿಕಾರಿಗಳೊಂದಿಗೆ ಮಹತ್ವದ ಸಭೆ 

Manjula VN

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ತಲೆದೋರಿರುವ ಪ್ರವಾಹ ನಷ್ಟ ಅಂದಾಜು ಕಾರ್ಯವನ್ನು ಪೂರ್ಣಗೊಳಿಸಿರುವ ಕೇಂದ್ರದ ಸಮೀಕ್ಷಾ ತಂಡ ರಾಜ್ಯದ ಅಧಿಕಾರಿಗಳೊಂದಿಗೆ ಬುಧವಾರ ಮಹತ್ವದ ಸಭೆ ನಡೆಸಿತು. 

ಸಭೆಯಲ್ಲಿ ರಾಜ್ಯದಲ್ಲಿ ನೆರೆಯಿಂದ ರೂ.8,071 ಕೋಟಿ ಅಂದಾಜು ಹಾನಿಯಾಗಿದ್ದು, ಎಸ್'ಡಿಆರ್ಎಫ್ ನಿಯಮಗಳ ಅನ್ವಯ ರೂ.628.7 ಕೋಟಿ ಅನುದಾನ ಮಾತ್ರ ಬರುತ್ತದೆ. ಇದು ಸಾಕಾಗುವುದಿಲ್ಲ. ಈ ಬಾರಿ ಹೆಚ್ಚುವರಿ ಹಣ ಬಿಡುಗಡೆ ಮಾಡುವಂತೆ ಕೇಂದ್ರದ ನೆರೆ ಅಧ್ಯಯನ ತಂಡಕ್ಕೆ ಮನವಿ ಮಾಡಿದ್ದೇವೆಂದು ಕಂದಾಯ ಸಚಿವ ಆರ್.ಅಶೋಕ್ ಅವರು ಹೇಳಿದ್ದಾರೆ. 

ಅಲ್ಲದೆ, ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಉಂಟಾಗುತ್ತಿರುವ ನೆರೆ ಹಾನಿ ನಿಯಂತ್ರಿಸಲು ಪ್ರವಾಹ ಮುನ್ಸೂಚನೆ ಹಾಗೂ ಪ್ರತಿಕ್ರಿಯೆಗಾಗಿ ಸಮಗ್ರ ವ್ಯವಸ್ಥೆ ಮಾಡಬೇಕು. ಜೊತೆಗೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಭೂ ಕುಸಿತ ಅಪಾಯದ ಮ್ಯಾಪಿಂಗ್ ಮತ್ತು ತ್ವರಿತ ಎಚ್ಚರಿಕೆ ನೀಡುವ ವ್ಯವಸ್ಥೆ ಸ್ಥಾಪಿಸಲು ರಾಷ್ಟ್ರೀಯ ವಿಪತ್ತು ನಿಯಂತ್ರಣ ಕಾರ್ಯಕ್ರಮದ ಅಡಿ ಯೋಜನೆ ರೂಪಿಸಬೇಕು ಎಂದು ರಾಜ್ಯ ಸರ್ಕಾರದ ಪರವಾಗಿ ಕೇಂದ್ರದ ತಂಡಕ್ಕೆ ಮನವಿ ಸಲ್ಲಿಸಿದ್ದೇವೆಂದು ತಿಳಿಸಿದ್ದಾರೆ. 

ರಾಜ್ಯದ ವಿವಿಧ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೆರೆ ಅಧ್ಯಯನ ನಡೆಸಿದ ಕೇಂದ್ರ ತಂಡದೊಂದಿಗೆ ಬುಧವಾರ ವಿಕಾಸಸೌಧದಲ್ಲಿ ಕೇಂದ್ರ ತಂಡದೊಂದಿಗೆ ಬುಧವಾರ ವಿಕಾಸಸೌಧದಲ್ಲಿ ಸಭೆ ನಡೆಸಿದ ಅವರು ಬಳಿಕ ಮಾತನಾಡಿದರು. 

ಕೇಂದ್ರ ಅಧ್ಯಯನ ತಂಡದೊಂದಿಗೆ ಸಭೆ ನಡೆಸಿದ್ದ ಯಡಿಯೂರಪ್ಪ ರಾಜ್ಯದಲ್ಲಿ ನೆರೆಯಿಂದ ರೂ.8,071 ಕೋಟಿ ನಷ್ಟ ಉಂಟಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಎಸ್'ಡಿಆರ್'ಎಫ್ ಅಡಿ ರೂ.628 ಕೋಟಿ ಮಾತ್ರ ಅನುದಾನ ಬರುತ್ತದೆ. ರಾಜ್ಯವು ಸಂಪೂರ್ಣ ಮನೆ ಹಾನಿಗೆ ರೂ.5 ಲಕ್ಷ ನೆರವು ನೀಡುತ್ತಿದೆ. ಜೊತೆಗೆ ಭಾಗಶಃ ಹಾನಿಗೆ ರೂ.3 ಲಕ್ಷ, ಸ್ವಲ್ಪ ಹಾನಿಗೆ ರೂ.50 ಸಾವಿರ ಪರಿಹಾರ ನೀಡುತ್ತಿದೆ. ಹೆಚ್ಚುವರಿ ಅನುದಾನಕ್ಕೆ ಮನವಿ ಮಾಡಿದ್ದೇವೆಂದು ಹೇಳಿದ್ದಾರೆ. 

ಆಗಸ್ಟ್ 4ರಿಂದ 8ನೇ ಹಾಗೂ 15ರಿಂದ 18ರವರೆಗೆ ರಾಜ್ಯದಲ್ಲಿ ತೀವ್ರ ಮಳೆ ಉಂಟಾಗಿದ್ದು, ಅತಿವೃಷ್ಟಿಯಿಂದ ರಾಜ್ಯದ 23 ಜಿಲ್ಲೆಗಳ 130 ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳಾಗಿ ಘೋಷಿಸಲಾಗಿತ್ತು. ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ಅವರ ನೇತೃತ್ವದಲ್ಲಿ 3 ತಂಡ ಮಂಗಳವಾರ ಕೊಡಗು, ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಕ ಸೇರಿ ವಿವಿಧ ಕಡೆ ಭೇಟಿ ನೀಡಿ ಪ್ರವಾಹದಿಂದ ಉಂಟಾಗಿರುವ ಹಾನಿ ಬಗ್ಗೆ ಅಧ್ಯಯನ ನಡೆಸಿದೆ ಎಂದಿದ್ದಾರೆ. 

SCROLL FOR NEXT