ರಾಜ್ಯ

ಶಾಸಕ ಜಮೀರ್ ದೂರು ಹಿನ್ನೆಲೆ: ಉದ್ಯಮಿ ಪ್ರಶಾಂತ್ ಸಂಬರಗಿ ವಿರುದ್ಧ ಎಫ್‌ಐಆರ್‌ ದಾಖಲು

Raghavendra Adiga

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ವಿರುದ್ಧ ತಮ್ಮ ಮೇಲೆ ಆರೋಪ ಮಾಡಿದ್ದ ಉದ್ಯಮಿ ಪ್ರಶಾಂತ್ ಸಂಬರಗಿ ವಿರುದ್ಧ ಮಾಜಿ ಸಚಿವ, ಶಾಸಕ ಜಮೀರ್ ಅಹಮದ್​ ಖಾನ್ ದೂರಿನ ಹಿನ್ನೆಲೆಯಲ್ಲಿ  ಚಾಮರಾಜಪೇಟೆ ಪೋಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಶಾಸಕ ಜಮೀರ್ ಅಹಮದ್ ಖಾನ್ "ಪ್ರಶಾಂತ್ ಸಂಬರಗಿ ಎಂಬಾತನ  ಸುಳ್ಳು ಆರೋಪಗಳ ಬಗ್ಗೆ ಬೆಂಗಳೂರಿನ 24ನೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದೇನೆ. ದೂರಿನಂತೆ ಐಪಿಸಿ ಸೆಕ್ಷನ್ 120(B), 504, 463, 465, 506 ಸೆಕ್ಷನ್ ಗಳ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆಗೆ ಚಾಮರಾಜಪೇಟೆ ಠಾಣೆಯ ಪೊಲೀಸರಿಗೆ ನ್ಯಾಯಾಲಯ ಆದೇಶ ನೀಡಿದೆ." ಎಂದಿದ್ದಾರೆ.

ಇದಲ್ಲದೆ "ಡ್ರಗ್ಸ್ ನಂಟಿಗೆ ಸಂಬಂಧಿಸಿದಂತೆ ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದುದ್ದು. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಮಾನ್ಯ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಲ್ಲಿ ಒತ್ತಾಯಿಸುತ್ತೇನೆ." ಎಂದಿದ್ದಾರೆ.

"ಜೂನ್ 08, 2019 ರಂದು ನಾನು ಸಂಜನಾ ಅವರ ಜೊತೆ ಶ್ರೀಲಂಕಾಕ್ಕೆ ಹೋಗಿದ್ದೆ ಎಂದು ಆರೋಪಿಸಲಾಗಿದೆ. ಹಾಗಿದ್ದಲ್ಲಿ ವಿಮಾನ ಪ್ರಯಾಣದ ಟಿಕೆಟ್ ಗಳಿರಬೇಕಲ್ಲಾ? ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದರೆ ಅಲ್ಲಿಯೂ ದಾಖಲೆಗಳಿಬೇಕಲ್ಲಾ? ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ನನ್ನ ಓಡಾಟದ ಚಿತ್ರಗಳೂ ಇರಬೇಕಲ್ವಾ? ಈ ಬಗ್ಗೆಯೂ ತನಿಖೆ ನಡೆಯಲಿ

"ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಬಿಜೆಪಿ ಸರ್ಕಾರ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ನಾನೇನೋ ಪ್ರಭಾವ ಬೀರುತ್ತಿದ್ದೆ ಎಂದು ಹೇಳಬಹುದಿತ್ತು. ಈಗ ನಟಿ ಸಂಜನಾ ಪೊಲೀಸರ ವಶದಲ್ಲಿದ್ದಾರೆ. ಆದ್ದರಿಂದ ಪೊಲೀಸರು ಆಕೆಯನ್ನು ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಳ್ಳಲಿ. ಅದೇ ರೀತಿ ಶ್ರೀಲಂಕಾ ಪ್ರವಾಸದ ಬಗ್ಗೆಯೂ ತನಿಖೆ ನಡೆಸಲಿ

"ಪೊಲೀಸರು ನಡೆಸುವ ತನಿಖೆಯಲ್ಲಿ ಸಂಬರಗಿ ಮಾಡಿರುವ ಆರೋಪಗಳು ಸಾಬೀತಾದರೆ ನನ್ನ ಸಂಪೂರ್ಣ ಆಸ್ತಿಯನ್ನು ರಾಜ್ಯ ಸರ್ಕಾರಕ್ಕೆ ಬರೆದುಕೊಡಲು ಸಿದ್ಧನಿದ್ದೇನೆ. ನನ್ನ ಮೇಲಿನ ಆರೋಪಗಳು ಸುಳ್ಳು ಎಂದು ಕಂಡುಬಂದರೆ ಆರೋಪಿಗಳನ್ನು ಈ ನೆಲದ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಲಿ

"ನಾನು ರಾಜಕೀಯದಲ್ಲಿರುವ ವ್ಯಕ್ತಿ, ಸುಳ್ಳು ಆರೋಪಗಳು, ಚಾರಿತ್ರ್ಯ ಹನನದ ಪ್ರಯತ್ನಗಳು ನನಗೆ ಹೊಸತೇನಲ್ಲ. ಅವೆಲ್ಲವನ್ನು ಜನಾಶೀರ್ವಾದದ ಬಲದಿಂದ ಎದುರಿಸುತ್ತಾ ಬಂದಿದ್ದೇನೆ. ನಾನು ಏನೆನ್ನುವುದು ನಾನು ನಂಬಿರುವ ಜನ ಮತ್ತು ನನ್ನ ಆತ್ಮಸಾಕ್ಷಿಗೆ ಗೊತ್ತಿದೆ" ಎಂದು ಸರಣಿ ಟ್ವೀಟ್ ಮೂಲಕ ಶಾಸಕರು ಹೇಳಿದ್ದಾರೆ. 

SCROLL FOR NEXT