ರಾಜ್ಯ

ಕೊರೋನಾದಿಂದ ಬಿಜೆಪಿ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ನಿಧನ: ಪ್ರಧಾನಿ ಮೋದಿ ಸಂತಾಪ 

Srinivas Rao BV

ಬೆಂಗಳೂರು: ಇತ್ತೀಚಿಗಷ್ಟೇ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅಶೋಕ್​ ಗಸ್ತಿ(55) ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 

ಮಣಿಪಾಲ್ ಆಸ್ಪತ್ರೆಯಲ್ಲಿ ಗಸ್ತಿ ಚಿಕಿತ್ಸೆ ಪಡೆಯುತ್ತಿದ್ದರು. ಅಶೋಕ್ ಗಸ್ತಿ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. 

ಸೆಪ್ಟೆಂಬರ್ 2ರಂದು ಗಸ್ತಿ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು. ಬಳಿಕ ಅವರು ನಗರದ ಮಣಿಪಾಲ್​ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂಲತಃ ಬಳ್ಳಾರಿ ಜಿಲ್ಲೆಯವರಾದ ಅಶೋಕ್ ಗಸ್ತಿ ಅವರು ಸವಿತಾ ಸಮಾಜಕ್ಕೆ ಸೇರಿದ್ದವರು. ಆರ್ ಎಸ್ಎಸ್‍ನ ಶಿಸ್ತಿನ ಸಿಪಾಯಿ ಆಗಿದ್ದ ಗಸ್ತಿ ಅವರನ್ನು ನಾಲ್ಕು ತಿಂಗಳ ಹಿಂದಷ್ಟೇ ರಾಜ್ಯಸಭೆಗೆ ಆಯ್ಕೆ ಮಾಡಲಾಗಿತ್ತು. ವಿಧಾನಸಭೆಯಿಂದ ರಾಜ್ಯಸಭೆಗೆ ಜೂನ್ 8ರಂದು ನಡೆಯಬೇಕಿದ್ದ ಚುನಾವಣೆಗೆ ಬಿಜೆಪಿ ಸಾಮಾನ್ಯ ಕಾರ್ಯಕರ್ತರಾಗಿದ್ದ ಅಶೋಕ್ ಗಸ್ತಿ ಅವರನ್ನು ಕಣಕ್ಕಿಳಿಸಿತ್ತು ಮತ್ತು ಅವಿರೋಧವಾಗಿ ಆಯ್ಕೆಯಾಗಿದ್ದರು. 

ಗಸ್ತಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ 

ಅಶೋಕ್ ಗಸ್ತಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ, ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರು ಪಕ್ಷ ಸಂಘಟನೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಬಡವರ, ದೀನ-ದಲಿತರ ಸಬಲೀಕರಣಕ್ಕಾಗಿ ದುಡಿಯುತ್ತಿದ್ದರು. ಅವರ ನಿಧನದಿಂದಾಗಿ ನೋವುಂಟಾಗಿದೆ ಎಂದು ಮೋದಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

SCROLL FOR NEXT