ರಾಜ್ಯ

ಡಿಜೆ ಹಳ್ಳಿ ಗಲಭೆ ಪ್ರಕರಣ: ಮಾಜಿ ಮೇಯರ್ ಸಂಪತ್'ಗೆ ಮತ್ತೆ ಸಿಸಿಬಿ ಬುಲಾವ್

Manjula VN

ಬೆಂಗಳೂರು: ಇತ್ತೀಚೆಗೆ ನಡೆದಿದ್ದ ಡಿಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ಹಾಗೂ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಅವರಿಗೆ ವಿಚಾರಣೆಗೆ ಬರುವಂತೆ ಸಿಸಿಬಿಯು ಗುರುವಾರ ಎರಡನೇ ಬಾರಿಗೆ ನೋಟಿಸ್ ಜಾರಿ ಮಾಡಿದೆ. 

ಈ ನೋಟಿಸ್ ಬೆನ್ನಲ್ಲೇ ಕೊರೋನಾ ಪಾಸಿಟಿವ್ ಕಾರಣ ನೀಡಿದ ಸಂಪತ್ ರಾಜ್ ಆಸ್ಪತ್ರೆಗೆ ದಾಖಲಾಗಿದ್ದು, ಶುಕ್ರವಾರ ಸಿಸಿಬಿ ವಿಚಾರಣೆಗೆ ಅವರು ಗೈರಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮಾಜಿ ಮೇಯರ್ ಗೈರಾದರೆ ಮುಂದೆ ಸಿಸಿಬಿ ತೆಗೆದುಕೊಳ್ಳುವ ಕ್ರಮದ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ. 

ಗಲಭೆ ಪ್ರಕರಣದಲ್ಲಿ ಕೆಲವು ಮಾಹಿತಿ ಆಧರಿಸಿ ಸಂಪತ್ ರಾಜ್ ಅವರಿಗೆ ಶುಕ್ರವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ತಿಳಿಸಿದ್ದಾರೆ. 

ಫೇಸ್'ಬುಕ್ ನಲ್ಲಿ ಇಸ್ಲಾಂ ಧರ್ಮಗುರು ಮಹಮ್ಮದ್ ಪೈಗಂಬರ್ ಕುರಿತು ಪುಲಿಕೇಶಿ ನಗರ ಶಾಸಕ ಶ್ರೀನಿವಾಸಮೂರ್ತಿ ಸೋದರ ಸಂಬಂಧಿ ನವೀನ್ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಎಂಬ ಕಾರಣಕ್ಕೆ ಆ.11ರಂದು ಡಿಜೆ ಹಳ್ಳಿ ಹಾಗೂ ಕೆ.ಜಿಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗಲಭೆ ನಡೆದಿತ್ತು. ಈ ವೇಳೆ ಶಾಸಕರ ಮನೆ ಹಾಗೂ ಪೊಲೀಸ್ ಠಾಣೆಗಳಿಗೆ ಬೆಂಕಿ ಹಾಕಿ ದುಷ್ಕರ್ಮಿಗಳು ದಾಂಧಲೆ ನಡೆಸಿದ್ದರು. ಈ ಪ್ರಕರಣ ಸಂಬಂಧ ಎಸ್'ಡಿಪಿಐ ಮುಖಂಡರು ಸೇರಿದಂತೆ ಸುಮಾರು 380 ಜನರ ಬಂಧನವಾಗಿದೆ. 

SCROLL FOR NEXT