ರಾಜ್ಯ

10 ಲಕ್ಷ ಉದ್ಯೋಗ ಸೃಷ್ಟಿ; ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆಯಲಿರುವ ನೂತನ‌ ನೀತಿ

Manjula VN

ಬೆಂಗಳೂರು: 10 ಲಕ್ಷ ಉದ್ಯೋಗ ಸೃಷ್ಟಿ,ಬಂಡವಾಳ ಹೂಡಿಕೆ ಉತ್ತೇಜನಕ್ಕಾಗಿ ಸಹಾಯ ಧನ,ಆರ್ಥಿಕ ಬೆಳವಣಿಗೆಗೆ ಒತ್ತು,ಪ್ರವಾಸೋದ್ಯಮ ಯೋಜನೆಗಳಿಗೆ ವಿನಾಯಿತಿ,ಐದು ವರ್ಷಗಳಲ್ಲಿ ಪ್ರವಾ ಸೋದ್ಯಮ ಕ್ಷೇತ್ರಕ್ಕೆ ಹೊಸ ರೂಪ, ದೇಶದಲ್ಲೇ ರಾಜ್ಯವನ್ನು ಪ್ರವಾಸೋದ್ಯಮ ವಲಯದಲ್ಲಿ ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ದೂರದೃಷ್ಟಿಯುಳ್ಳ ಬಹುನಿರೀಕ್ಷಿತ 2020-25ನೇ ಸಾಲಿನ ಕರ್ನಾಟಕ ಪ್ರವಾಸೋದ್ಯಮ ನೀತಿ ಜಾರಿಗೆ ಬಂದಿದೆ‌.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 2020- 25ನೇ ಸಾಲಿನ ಕರ್ನಾಟಕ ಪ್ರವಾಸೋದ್ಯಮ ನೀತಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಇಲಾಖೆಯ ಅಧಿಕಾರಿಗಳು ಬಿಡುಗಡೆ ಮಾಡಿದರು‌.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಸಮುದಾಯವನ್ನು ಒಗ್ಗೂಡಿಸಿಕೊಂಡು ಪ್ರವಾಸೋದ್ಯಮ ಸಮಗ್ರವಾಗಿ ಅಭಿವೃದ್ಧಿಗೊಳಿಸಲು ನೀತಿ ರೂಪಿಸಲಾಗಿದೆ. ಇದು ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ದಿಕ್ಸೂಚಿಯಾಗಲಿದೆ. ರಾಜ್ಯದ ಪ್ರವಾಸಿ ತಾಣಗಳಲ್ಲಿ ಮುಂದಿನ 5 ವರ್ಷದಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.

ರಾಜ್ಯದ ಶ್ರೀಮಂತಿಕೆ ಹಾಗೂ ಸಾಂಸ್ಕೃತಿಕ ವೈಭವ, ಪರಂಪರೆಗಳನ್ನು ಪರಿಚಯಿಸಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆ ಆಕರ್ಷಿಸಲಾಗುವುದು. ಕೊರೋನಾದಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಆಗಿರುವ ನಷ್ಟವನ್ನು ಸರಿದೂಗಿಸಿಕೊಂಡು ಇಡೀ ದೇಶದಲ್ಲೇ ರಾಜ್ಯವನ್ನು ಪ್ರವಾಸೋದ್ಯಮದ ಆಕರ್ಷಣೀಯ ತಾಣವನ್ನಾಗಿಸಲು 78 ಪ್ರವಾಸಿ ತಾಣಗಳಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲಾಗುವುದು. ಪ್ರವಾಸೋದ್ಯಮ ನೀತಿಯಲ್ಲಿ ಕೃಷಿ ಪ್ರವಾಸಕ್ಕೂ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ. 

ಸಚಿವ ಸಿಟಿ ರವಿ ಮಾತನಾಡಿ, ನೂತನ ಪ್ರವಾಸೋದ್ಯಮ ನೀತಿಯು ಹೊಸದಾಗಿ 10 ಲಕ್ಷ ಹೊಸ ಉದ್ಯೋಗ ಸೃಷ್ಟಿಸಲು ಅನುಕೂಲ ಮಾಡಿಕೊಡಲಿದೆ. 8 ಜಿಲ್ಲೆಗಳನ್ನು ಆದ್ಯತಾ ಪ್ರವಾಸಿ ತಾಣಗಳೆಂದು ಪರಿಗಣಿಸಿ ಅಭಿವೃದ್ಧಿಗೆ ಶೇ.10ರಷ್ಟು ಪ್ರೋತ್ಸಾಹ ಧನ ನೀಡಲಾಗುವುದು. ಒಟ್ಟು ರೂ.500 ಕೋಟಿ ಸಹಾಯಧನ ನೀಡಿ ರೂ.5000 ಕೋಟಿ ಬಂಡವಾಳ ಆಕರ್ಷಿಸಲಾಗುವುದು. ಪ್ರವಾಸೋದ್ಯಮ ನೀತಿಯಲ್ಲಿ 18 ಬಗೆಯ ಪ್ರವಾಸೋದ್ಯಮಕ್ಕೆ ಉತ್ತೇಜನ 270 ಆದ್ಯತಾ ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲಾಗುತ್ತದೆ. 

ಪ್ರವಾಸೋದ್ಯಮ ವಲಯಗಳಿಂದ ರಾಜ್ಯದ ಆಂತರಿಕ ಉತ್ಪನ್ನಕ್ಕೆ ಸಿಗುತ್ತಿರುವ ಕೊಡುಗೆಯನ್ನು ಶೇ.14.8ರಿಂದ ಶೇ.20ಕ್ಕೆ ಏರಿಸುವ ಗುರಿ ಹೊಂದಿದ್ದೇವೆ. ರಾಜ್ಯದ ಲಂಬಾಣಿ ಹಾಗೂ ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಲು ಒತ್ತು ನೀಡಲಾಗಿದೆ. 

2006ರಲ್ಲಿ ಕರ್ನಾಟಕಕ್ಕೆ 36 ಲಕ್ಷ ಪ್ರವಾಸಿಗರು ಆಗಮಿಸಿದ್ದರೆ 2018ರ ವೇಳೆಗೆ 2.15 ಕೋಟಿಗೆ ಏರಿಕೆಯಾಗಿದೆ. ಪ್ರವಾಸೋದ್ಯಮದಲ್ಲಿ ದೇಶದಲ್ಲಿಯೇ 3ನೇ ಸ್ಥಾನದಲ್ಲಿದ್ದೇವೆ. ಈ ನೀತಿ ಮೂಲಕ ದೇಶದ ಮೊದಲ ಹಾಗೂ ವಿಶ್ವದ ಮೊದಲ 5 ಸ್ಥಾನಗಳಲ್ಲಿ ಇರಬೇಕು ಎಂಬ ಗುರು ಹೊಂದಿದ್ದೇವೆಂದು ತಿಳಿಸಿದ್ದಾರೆ. 

SCROLL FOR NEXT