ಸಂಗ್ರಹ ಚಿತ್ರ 
ರಾಜ್ಯ

ಪದವಿಗಳ ಮಾನ್ಯತೆ ನಿರ್ಧರಿಸಲು ನ್ಯಾಯಾಲಯ ವೃತ್ತಿಪರ ಸಂಸ್ಥೆಗಳಲ್ಲ: ಹೈಕೋರ್ಟ್‌

ಎಂಜಿನಿಯರಿಂಗ್‌ ಪದವಿ ಕೋರ್ಸ್‌ ಮತ್ತು ಮೂಲ ವಿಜ್ಞಾನ ಪದವಿ ಕೋರ್ಸ್‌ಗಳು ಸಮಾನವೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ವಿಚಾರದಲ್ಲಿ ನ್ಯಾಯಾಲಯಗಳು ವೃತ್ತಿಪರ ಸಂಸ್ಥೆಗಳಲ್ಲ ಎಂದು ಹೈಕೋರ್ಟ್‌ ವಿಭಾಗೀಯ ಪೀಠ ಶುಕ್ರವಾರ ಅಭಿಪ್ರಾಯಪಟ್ಟಿದೆ.

ಬೆಂಗಳೂರು: ಎಂಜಿನಿಯರಿಂಗ್‌ ಪದವಿ ಕೋರ್ಸ್‌ ಮತ್ತು ಮೂಲ ವಿಜ್ಞಾನ ಪದವಿ ಕೋರ್ಸ್‌ಗಳು ಸಮಾನವೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ವಿಚಾರದಲ್ಲಿ ನ್ಯಾಯಾಲಯಗಳು ವೃತ್ತಿಪರ ಸಂಸ್ಥೆಗಳಲ್ಲ ಎಂದು ಹೈಕೋರ್ಟ್‌ ವಿಭಾಗೀಯ ಪೀಠ ಶುಕ್ರವಾರ ಅಭಿಪ್ರಾಯಪಟ್ಟಿದೆ.

ಬೆಂಗಳೂರು ಜಲಮಂಡಳಿಯ ಸಹಾಯಕ/ ಗುಮಾಸ್ತ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದ ಏಳು ಅಭ್ಯರ್ಥಿಗಳ ಎಂಜಿನಿಯರಿಂಗ್‌ ಪದವಿಗಳನ್ನು ವಿಜ್ಞಾನ ಪದವಿ ಎಂದು ಪರಿಗಣಿಸುವಂತೆ ಹೈಕೋರ್ಟ್‌ ವಿಭಾಗೀಯ ಪೀಠ 2020ರ ಸೆಪ್ಟೆಂಬರ್‌ 3ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಜಲಮಂಡಳಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿತು.

ಜಲಮಂಡಳಿಯ ಸಹಾಯಕ ಹುದ್ದೆ ನೇಮಕಾತಿಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಕಲಾ, ವಾಣಿಜ್ಯ ಅಥವಾ ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿರಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಏಳು ಮಂದಿ ಎಂಜಿನಿಯರಿಂಗ್‌ (ಬಿಇ) ಪದವೀಧರರೂ ಅರ್ಜಿ ಸಲ್ಲಿಸಿದ್ದರು. ವಿಜ್ಞಾನ ಪದವೀಧರರೆಂದು ಪರಿಗಣಿಸಬೇಕೆಂಬ ಅವರ ಕೋರಿಕೆಯನ್ನು ಜಲಮಂಡಳಿ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಗಳನ್ನು ಮಾನ್ಯ ಮಾಡುವಂತೆ ಏಕಸದಸ್ಯ ಪೀಠ ಆದೇಶಿಸಿತ್ತು.

ಝಹೂರ್‌ ಅಹ್ಮದ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ಶುಕ್ರವಾರದ ವಿಚಾರಣೆ ವೇಳೆ ಉಲ್ಲೇಖಿಸಿದ ವಿಭಾಗೀಯ ಪೀಠ, ‘ಎಂಜಿನಿಯರಿಂಗ್‌ ಪದವಿಯು ಮೂಲ ವಿಜ್ಞಾನ ವಿಷಯದ ಪದವಿಗೆ ಸಮನಾದುದೇ? ಇಲ್ಲವೋ ಎಂಬುದನ್ನು ನ್ಯಾಯಾಲಯ ನಿರ್ಧರಿಸಲು ಸಾಧ್ಯವಿಲ್ಲ. ನೇಮಕಾತಿ ಸಂದರ್ಭದಲ್ಲಿ ಅಭ್ಯರ್ಥಿಗಳ ಅರ್ಹತೆಗೆ ಸಂಬಂಧಿಸಿದ ಮಾನದಂಡಗಳನ್ನು ನಿಗದಿ ಮಾಡುವ ಅಧಿಕಾರ ಉದ್ಯೋಗದಾತನಿಗೆ ಸೇರಿದ್ದು. ಅದನ್ನು ನ್ಯಾಯಾಂಗದ ಪರಿಶೀಲನೆ ಒಳಪಡಿಸಿ ಅರ್ಹತಾ ಮಾನದಂಡಗಳ ವ್ಯಾಪ್ತಿಯನ್ನು ವಿಸ್ತರಿಸಲಾಗದು’ ಎಂದು ಹೇಳಿತು.

‘ವಿಶ್ವವಿದ್ಯಾಲಯ ಅನುದಾನ ಆಯೋಗದಂತಹ ವೃತ್ತಿಪರ ಸಂಸ್ಥೆಗಳೇ ಈ ವಿಚಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಈ ಕಾರಣದಿಂದ ಮೇಲ್ಮನವಿದಾರರ ಅರ್ಜಿಯನ್ನು ಪುರಸ್ಕರಿಸಬೇಕಾಗಿದೆ’ ಎಂಬ ಅಭಿಪ್ರಾಯ ನೀಡಿದ ನ್ಯಾಯಪೀಠ, ಜಲಮಂಡಳಿಯ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

SCROLL FOR NEXT