ರಾಜ್ಯ

ಕಲ್ಲು ತೂರಾಟ: ಮುಷ್ಕರದ ನಡುವೆ ಕರ್ತವ್ಯಕ್ಕೆ ಹಾಜರಾಗಿದ್ದ ಸಾರಿಗೆ ಸಂಸ್ಥೆ ಬಸ್ ಚಾಲಕ ಸಾವು

Manjula VN

ಬಾಗಲಕೋಟೆ: ಬಸ್ ಮುಷ್ಕರದ ನಡುವೆ ಕರ್ತವ್ಯಕ್ಕೆ ಹಾಜರಾಗಿದ್ದ ಚಾಲಕರೊಬ್ಬರ ಮೇಲೆ ಬೈಕ್ ನಿಂದ ಬಂದ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಶುಕ್ರವಾರ ನಡೆದಿದೆ. 

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗ ಜಮಖಂಡಿ ಘಟಕದ ಬಸ್ ಚಾಲಕ ನಬೀದ ರಸೂಲ್ ಕೆ. ಅವಟಿ (58) ದುಷ್ಕರ್ಮಿಗಳ ಕುಕೃತ್ಯಕ್ಕೆ ಬಲಿಯಾದ ದುರ್ದೈವಿಯಾಗಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದಂದೆ ಈಗಾಗಲೇ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಷ್ಕರಕ್ಕೆ ಬೆಂಬಲ ನೀಡಿಲ್ಲ ಎಂಬ ಉದ್ದೇಶದಿಂದ ಇವರುಗಳು ಬಂದು ಬಸ್'ಗೆ ಕಲ್ಲು ತೂರಿದ್ದಾರೆ. ಈ ವೇಳೆ ಕಲ್ಲು ಚಾಲಕನಿಗೆ ಬಡಿದಿದ್ದರಿಂದ ಚಾಲಕ ಮೃತಪಟ್ಟಿದ್ದಾರೆಂದು ಎಸ್ಪಿ ಲೋಕೇಶ ಜಗಳಾಸರ್ ತಿಳಿಸಿದ್ದಾರೆ. 

ಶುಕ್ರವಾರ ಫತ್ತರಗಿಯಿಂದ ವಿಜಯಪುರ ಮಾರ್ಗವಾಗಿ ಜಮಖಂಡಿಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಮಧ್ಯಾಹ್ನ ಸಂಚರಿಸುತ್ತಿದ್ದ ವೇಳೆ ನಾಲ್ಕು ಬೈಕ್ ಗಳಲ್ಲಿ ಹೆಲ್ಮೆಟ್ ಧರಿಸಿ ಬಂದ ಕಿಡಿಗೇಡಿಗಳು ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಈ ವೇಳೆ ಕಲ್ಲು ಬಸ್'ನ ಗಾಜು ಒಡೆದು ಬಳಿಕ ಗಂಟಲಿಗೆ ಬಡಿದ ಕಾರಣ ಚಾಲಕ ನಬಿ ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಜಮಖಂಡಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಚಾಲಕ ನಬೀದ ರಸೂಲ್ ಕುಟುಂಬಕ್ಕೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರೂ.30 ಲಕ್ಷ ಪರಿಹಾರ ನೀಡಿದೆ. 

SCROLL FOR NEXT