ರಾಜ್ಯ

14 ದಿನ ಕೊರೋನಾ ಕರ್ಫ್ಯೂ ಜಾರಿಗೊಳಿಸಿದ ಸರ್ಕಾರ: ಆತಂಕಗೊಂಡು ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ಜನ

Manjula VN

ಬೆಂಗಳೂರು: ಕೊರೋನಾ ಸೋಂಕಿಗೆ ಕಡಿವಾಣ ಹಾಕುವ ಸಲುವಾಗಿ ರಾಜ್ಯ ಸರ್ಕಾರ 2 ವಾರಗಳ ಕಾಲ ಕೊರೋನಾ ಕರ್ಫ್ಯೂ ಘೋಷಣೆ ಮಾಡುತ್ತಿದ್ದಂತೆಯೇ ಮುಂದೇನು ಎಂಬ ಚಿಂತಿಗೀಡಾದ ಜನರು ಮಾರುಕಟ್ಟೆಗಳು, ಅಂಗಡಿಗಳಿಗೆ ಮುಗಿಬಿದ್ದು, ಹಣ್ಣು, ತರಕಾರಿ ಹಾಗೂ ದಿನಸಿ ವಸ್ತುಗಳನ್ನು ಖರೀದಿ ಮಾಡಿದರು. 

ಬೆಂಗಳೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮಹಾನಗರಗಳ ಮಾಲ್, ಮಾರ್ಟ್ ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ದಾಂಗುಡಿಯಿಟ್ಟಿದ್ದು ಸರತಿ ಸಾಲಿನಲ್ಲಿ ನಿಂತು ಅಗತ್ಯ ವಸ್ತುಗಳನ್ನು ಖರೀದಿ ಮಾಡಿದರು. 

ಇನ್ನು ಬೆಳಗಾವಿ ಎಪಿಎಂಸಿಯ ಪ್ರಾಂಗಣದಲ್ಲಿ ಸೋಮವಾರ ಜನಸಾಗರವೇ ಹರಿದು ಬಂದಿದ್ದರೆ, ಚಿಕ್ಕಬಳ್ಳಾಪುರ ಎಪಿಎಂಸಿ ಆವರಣದಲ್ಲಿ ನೂಕುನುಗ್ಗಲು ಉಂಟಾಯಿತು. ಗ್ರಾಹಕರು ಮತ್ತು ವರ್ತಕರಲ್ಲಿ ಬಹುತೇಕ ಮಾಸ್ಕ್ ಧರಿಸಿದ್ದರೂ, ಸಾಮಾಜಿಕ ಅಂತರ ಮಾತ್ರ ಮಾಯವಾಗಿತ್ತು. ವಿಜಯಪುರ, ಬಾಗಲಕೋಟೆ ಕಲಬುರಗಿ, ರಾಯಚೂರು, ಗದಗ, ಮಂಗಳೂರು, ಉಡುಪಿ, ಮಡಿಕೇರಿಗಳ ಮಾರುಕಟ್ಟೆ ಪ್ರದೇಶಗಳಲ್ಲಿ ಜನ ಗುಂಪುಗೂಡಿ ತರಕಾರಿ, ಹಾಲು ದಿನಸಿ ಸಾಮಾಗ್ರಿ ಖರೀದಿ ಮಾಡಿದರು. 

ಮೈಸೂರು ನಗರದ ಮಾರುಕಟ್ಟೆ ಪ್ರಾಂಗಣಗಳಲ್ಲಿ ಬೆಳಿಗ್ಗೆ ಶಾಂತವಾಗಿ ಖರೀದಿ ಪ್ರಕ್ರಿಯೆಗಳು ನಡೆದಿರೂ ಜನತಾ ಕರ್ಪ್ಯೂ ಘೋಷಣೆಯಾದ ಬಳಿಕ ನಗರದ ಸಂತೆಪೇಟೆಯಲ್ಲಿ ದಿನಸಿ ಖರೀಸಿದರು ಜನ ಮುಗಿಬಿದ್ದರು. ಸಂತೆಪೇಟೆ, ವಿನೋಬಾ ರಸ್ತೆ, ದೇವರಾಜ ಮಾರುಕಟ್ಟೆ ಸೇರಿದಂತೆ ವಿವಿಧೆಡೆ ದಿನಸಿ, ಹಣ್ಣು, ತರಕಾರಿ ಹೂವು ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗಾಗಿ ಜನ ಆಗಮಿಸಿದ್ದು ಕಂಡು ಬಂದಿತು. 

ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಪರವಾನಗಿ ಇದ್ದರೂ ಕಲಬುರಗಿ, ಶಿವಮೊಗ್ಗ ಸೇರಿದಂತೆ ಕೆಲವೆಡೆಗಳಲ್ಲಿ ಆಟಿಕೆ, ಬಟ್ಟೆ, ಆಭರಣ, ಪೇಂಟ್, ಟೈಲ್ಸ್, ಹಾರ್ಡ್ ವೇರ್ ಸೇರಿದಂತೆ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಗಳು ಎಂದಿನಂತೆ ತೆರೆದಿರುವ ಬಗ್ಗೆ ಮಾಹಿತಿ ತಿಳಿದ ಕೂಡಲೇ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ಅಂಗಡಿ ಮುಂಗಟ್ಟು ಮುಚ್ಚಿಸಿದರು. 

SCROLL FOR NEXT