ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಮತ್ತು ಅಲ್ಲಿ ಸರ್ಕಾರ ಕಾಯ್ದಿರಿಸಿದ ಹಾಸಿಗೆಗಳ ಆಧಾರದ ಮೇಲೆ ಎಷ್ಟು ರೆಮ್ಡೆಸಿವಿರ್ ಔಷಧಿ ಆಗತ್ಯವಿದೆ ಎನ್ನುವ ಬಗ್ಗೆ ಅಂದಾಜು ಮಾಡಿ, ಅದರ ಪೂರೈಕೆ ಹೆಚ್ಚಿಸಲು ಮತ್ತು ಆಕ್ಸಿಜನ್ ಬಳಕೆ ಮಿತಿ ಹೆಚ್ಚಿಸಲು ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ರಾಜ್ಯದ್ಲಲಿ ಕೊವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು. ಈ ವೇಳೆ ಕೋವಿಡ್ ಎರಡನೇ ಅಲೆ ಬಗ್ಗೆ ಮಾಹಿತಿ ಇದ್ದರೂ ಸಜ್ಜಾಗದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಅಲ್ಲದೆ, ರಾಜ್ಯಕ್ಕೆ ಅಗತ್ಯ ಪ್ರಮಾಣದಲ್ಲಿ ಬೇಕಾದ ರೆಮ್ಡೆಸಿವಿರ್ ಪೂರೈಸಲು ಹಾಗೂ ಆಕ್ಸಿಜನ್ ಬಳಕೆ ಮಿತಿ ಹೆಚ್ಚಿಸಲು ರಾಜ್ಯ ಸರ್ಕಾರ ಸಲ್ಲಿಸುವ ಮನವಿಯನ್ನು ಶೀಘ್ರ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತು.
ವಿಚಾರಣೆ ವೇಳೆ ರಾಜ್ಯ ಸರ್ಕಾರ, ಬಿಬಿಎಂಪಿ ಮತ್ತು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ (ಫನಾ) ಅಧ್ಯಕ್ಷರ ವಾದ ಆಲಿಸಿದ ನ್ಯಾಯಪೀಠ, ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ನಿತ್ಯ ಆಕ್ಸಿಜನ್ ಬಳಕೆಗೆ ನಿಗದಿಪಡಿಸಿರುವ 802 ಮೆಟ್ರಿಕ್ ಟನ್ ಮಿತಿ ಹೆಚ್ಚಿಸಲು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ರೆಮ್ಡೆಸಿವಿರ್ ಪೂರೈಸಬೇಕಿದೆ ಎಂದು ಹೇಳಿತು. ಆಲ್ಲದೆ, ಖಾಸಗಿ ಆಸ್ಪತ್ರೆಗಳು ಮತ್ತು ಅಲ್ಲಿ ಸರ್ಕಾರ ಕಾಯ್ದಿರಿಸಿದ ಹಾಸಿಗೆಗಳ ಆಧಾರದ ಮೇಲೆ ಎಷ್ಟು ರೆಮ್ಡೆಸಿವಿರ್ ಔಷಧಿ ಆಗತ್ಯವಿದೆ ಎನ್ನುವ ಬಗ್ಗೆ ಅಂದಾಜು ಮಾಡಿ, ಅದರ ಪೂರೈಕೆ ಹೆಚ್ಚಿಸಲು ಮತ್ತು ಆಕ್ಸಿಜನ್ ಬಳಕೆ ಮಿತಿ ಹೆಚ್ಚಿಸಲು ಕೋರಿ ಎರಡು ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಆ ಬಗ್ಗೆ ಕೇಂದ್ರ ಸರ್ಕಾರ ಶೀಘ್ರ ನಿರ್ಧಾರ ತೆಗೆದುಕೊಳ್ಳಬೇಕು. ಈ ಕುರಿತು ಕೈಗೊಂಡ ಕ್ರಮಗಳ ಕುರಿತು ಮೇ.3ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕೆಂದು ಸೂಚಿಸಿ ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದಿಸಿ, ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಉತ್ಪಾದಿಸಲಾಗು್ತತಿದೆ. ಆದರೆ, ಕೇಂದ್ರ ಸರ್ಕಾರ ನಿತ್ಯ 802 ಮೆಟ್ರಿಕ್ ಟನ್ ಮಾತ್ರ ಆಕ್ಸಿಜನ್ ಬಳಸಲು ಮಿತಿ ಹೇರಿರುವ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಬಳಸು ಆಗುತ್ತಿಲ್ಲ. ಸದ್ಯ ರಾಜ್ಯದಲ್ಲಿ 1,471 ಮೆಟ್ರಿಕ್ ಟನ್ ಆಕ್ಸಿಜನ್ ನಿತ್ಯ ಅಗತ್ಯವಿದೆ. ಹಾಗೆಯೇ ಏ.21ರಿಂದ 30ರವರೆಗೆ 1.22 ಲಕ್ಷ ರೆಮ್ಡೆಸಿವಿರ್ ಕರ್ನಾಟಕದ ಕೋಟಾ ಆಗಿದೆ ಎಂದರು.
ವಿಚಾರಣೆಗೆ ಹಾಜರಾಗಿದ್ದ ಫನಾ ಅಧ್ಯಕ್ಷ ಡಾ.ಹೆಚ್.ಎಂ.ಪ್ರಸನ್ನ, ಬೆಂಗಳೂರು ಒಂದರಲ್ಲಿಯೇ ಪ್ರತೀನಿತ್ಯ 10 ಸಾವಿರ ರೆಮ್ಡೆಸಿವಿರ್ ಆಗತ್ಯವಿದೆ. ರೆಮ್ಡೆಸಿವಿರ್ ಸರ್ಕಾರದಿಂದಲೇ ಪೂರೈಕೆಯಾಗಬೇಕು ಎಂದು ತಿಳಿಸಿದರು.