ರಾಜ್ಯ

ಎರಡೂ ಡೋಸ್ ಲಸಿಕೆ ಪಡೆದ ಹೊರತಾಗಿಯೂ, ಬೆಂಗಳೂರಿಗೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ: ಬಿಬಿಎಂಪಿ

Srinivasamurthy VN

ಬೆಂಗಳೂರು: ಎರಡೂ ಡೋಸ್ ಲಸಿಕೆ ಪಡೆದ ಹೊರತಾಗಿಯೂ, ಬೆಂಗಳೂರಿಗೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಎಂದು ಬಿಬಿಎಂಪಿ ಹೇಳಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರು, ಎರಡೂ ಡೋಸ್ ಲಸಿಕೆ ಪಡೆದ ಹೊರತಾಗಿಯೂ, ಕೇರಳ ಮತ್ತು ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬರುವವರಿಗೆ 72 ಗಂಟೆಗಳ ಒಳಗಿನ ಕೋವಿಡ್ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಅವರು, 'ನೀವು ಕೇರಳ/ಮಹಾರಾಷ್ಟ್ರದಿಂದ ಪ್ರಯಾಣಿಸುತ್ತಿದ್ದರೆ, ನಿಮ್ಮಲ್ಲಿ  72 ಗಂಟೆಗಳ ಒಳಗೆ ನಡೆಸಿದ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಇದೆ ಖಚಿತಪಡಿಸಿಕೊಳ್ಳಿ. ವರದಿಯಿಲ್ಲದಿದ್ದರೆ, ಆರ್‌ಟಿ-ಪಿಸಿಆರ್ ಸ್ವ್ಯಾಬ್ ಸಂಗ್ರಹ ಮತ್ತು ಫಲಿತಾಂಶ ಬರುವವರೆಗೆ ಸಾಂಸ್ಥಿಕ  ಕ್ವಾರಂಟೈನ್ಗೆ ಒಳಪಡಬೇಕಾಗುತ್ತದೆ.

ವಾಣಿಜ್ಯ ಕಟ್ಟಡಗಳಲ್ಲಿ ಮಾರ್ಷಲ್ ಗಳು
ಇನ್ನು ಇದೇ ವೇಳೆ ವಾಣಿಜ್ಯ ಕಟ್ಟಡಗಳಲ್ಲಿ ಕೋವಿಡ್ ಮಾನದಂಡಗಳ ಪಾಲನೆ ಹಿನ್ನಲೆಯಲ್ಲಿ ಮಾರ್ಷಲ್ ಗಳನ್ನು ನೇಮಕ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿರುವ ಅವರು, ಕೋವಿಡ್ ನಿಯಗಳನ್ನು ಪಾಲಿಸದಿದ್ದರೆ ಮಾರ್ಷಲ್, ಹೋಮ್ ಗಾರ್ಡ್, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದಂಡ  ವಿಧಿಸಲಿದ್ದಾರೆ ಎಂದು ಹೇಳಿದ್ದಾರೆ. ವಾಣಿಜ್ಯ ಸಂಘಗಳೊಂದಿಗಿನ ವರ್ಚುವಲ್ ಸಭೆಯಲ್ಲಿ ಪಾಲ್ಗೊಂಡು ವಾಣಿಜ್ಯ‌ ಪ್ರದೇಶಗಳಲ್ಲಿ ಎಲ್ಲಾ ವರ್ತಕರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಸೂಚಿಸಿದ್ದೇನೆ ಎಂದು ಗೌರವ್ ಗುಪ್ತಾ ಹೇಳಿದ್ದಾರೆ.

ಅಪಾರ್ಟ್‌ಮೆಂಟ್‌ಗಳಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಕುರಿತು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದೊಂದಿಗೆ ವರ್ಚುಯಲ್ ಸಭೆ ನಡೆಸಿದ ಅವರು, ಸೋಂಕು ಹರಡುವುದನ್ನು ತಡೆಯಲು ಜನರು ತಪ್ಪದೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ. ವಿಡ್-ಸಂಬಂಧಿತ  ರೋಗಲಕ್ಷಣಗಳ ಕಂಡುಬಂದಲ್ಲಿ ತಕ್ಷಣ ಕೋವಿಡ್ ಪರೀಕ್ಷೆ ಮಾಡಿಸಬೇಕು ಎಂದು ಹೇಳಿದ್ದಾರೆ.
 

SCROLL FOR NEXT